Friday, November 22, 2024
Homeರಾಜ್ಯನಕಲಿ ಸುದ್ದಿಗಳ ಪರಿಶೀಲನೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಘಟಕ ಸ್ಥಾಪನೆ : ಸಿಎಂ

ನಕಲಿ ಸುದ್ದಿಗಳ ಪರಿಶೀಲನೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಘಟಕ ಸ್ಥಾಪನೆ : ಸಿಎಂ

ಬೆಂಗಳೂರು,ಜು.1– ನಕಲಿ ಸುದ್ದಿಗಳ ಪರಿಶೀಲನೆಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಧನಿಕ ಯುಗದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಮಾಧ್ಯಮಗಳು ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.

ನಗರದ ಪ್ರೆಸ್‌‍ಕ್ಲಬ್‌ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪ್ರೆಸ್‌‍ಕ್ಲಬ್‌ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ವೇಗವಾಗಿ ಜನರನ್ನು ಮುಟ್ಟುತ್ತಿದೆ. ಹಿಂದಿನ ದಿನಗಳಲ್ಲಿ ಸುದ್ದಿಗಾಗಿ ಟಿವಿ, ಪತ್ರಿಕೆಗಳು ಮತ್ತು ರೇಡಿಯೋವನ್ನು ಅವಲಂಬಿಸಬೇಕಿತ್ತು. ಈಗ ಅದಕ್ಕಿಂತಲೂ ವೇಗವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ದೊರೆಯುತ್ತಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಿಂದ ಉಪಯೋಗದ ಜೊತೆಗೆ ಕೆಟ್ಟ ಪರಿಣಾಮವೂ ಇದೆ. ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದರೆ ಉಪಯೋಗವಾಗಲಿದೆ. ಇಲ್ಲವಾದರೆ ನಕಲಿ ಸುದ್ದಿಗಳು ಸಮಾಜಕ್ಕೆ ತೊಂದರೆಯುಂಟು ಮಾಡುತ್ತವೆ. ಇವುಗಳನ್ನು ಪರಿಶೀಲಿಸಲು ಮತ್ತು ನಿಯಂತ್ರಿಸಲು ಪ್ರತೀ ಜಿಲ್ಲಾ ಕೇಂದ್ರದಲ್ಲೂ ವಿಶೇಷ ಘಟಕಗಳನ್ನು ಆರಂಭಿಸಿದ್ದೇವೆ ಎಂದರು.

ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾರು ಹಿತವರೋ ಅವರ ಪರವಾಗಿ ಹೆಚ್ಚು ಪ್ರಚಾರಗಳಾಗುತ್ತವೆ. ವಿರುದ್ಧವಾಗಿರುವವರನ್ನು ಟೀಕಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಬೇಡ ಎಂದು ಹೇಳುವ ಪರಿಸ್ಥಿತಿ ಈಗಿಲ್ಲ. ಆದರೆ ಅವುಗಳ ಮೇಲೆ ನಿಯಂತ್ರಣ ಅಗತ್ಯವಿದೆ ಎಂದು ಹೇಳಿದರು.

ತಾವು ಸಾಮಾಜಿಕ ಜಾಲತಾಣವನ್ನು ನೋಡುವುದನ್ನೇ ಬಿಟ್ಟಿದ್ದೇನೆ. ಮೊಬೈಲ್‌ ಫೋನ್‌ ಕೂಡ ಇಟ್ಟುಕೊಂಡಿಲ್ಲ. ಈ ಮೊದಲು ಆರು ತಿಂಗಳ ಕಾಲ ಮೊಬೈಲ್‌ ಇಟ್ಟುಕೊಂಡಿದ್ದೆ. ಆಗ ರಾತ್ರಿಯೆಲ್ಲಾ ಕರೆಗಳು ಬರುತ್ತಿದ್ದವು. ನಿದ್ರೆ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಫೋನ್‌ ಬಳಕೆ ನಿಲ್ಲಿಸಿದ್ದೇನೆ. ಸಿಬ್ಬಂದಿಗಳು ಮತ್ತು ಅಂಗರಕ್ಷಕರ ಫೋನ್‌ಗಳ ಮೂಲಕವೇ ನಾನು ಸಂಪರ್ಕ ಸಾಧಿಸುತ್ತೇನೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‌ ಮಾತನಾಡಿ, ಆಧುನಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ, ಸಾಮಾಜಿಕ ಜಾಲತಾಣಗಳಿಂದಾಗಿ ಮಾಧ್ಯಮಗಳು ಮತ್ತು ಸುದ್ದಿಸಂಸ್ಥೆಗಳು ಅಪ್ರಸ್ತುತವಾಗುತ್ತಿವೆ. ರಾಜ್ಯದ ಯಾವ ಪತ್ರಿಕೆಯ ಪ್ರಸಾರ ಸಂಖ್ಯೆ 30 ಲಕ್ಷ ದಾಟಿಲ್ಲ. ಆದರೆ ವಾಟ್‌್ಸ ಆ್ಯಪ್‌ ಬಳಕೆದಾರ ಸಂಖ್ಯೆ 35 ಕೋಟಿ, ಫೇಸ್‌‍ಬುಕ್‌ನಲ್ಲಿ 39 ಕೋಟಿ, ಇನ್ಸ್ಟಾಗ್ರಾಮ್‌ನಲ್ಲಿ 36 ಕೋಟಿ ಚಂದಾದಾರರಿದ್ದಾರೆ.

ಸಾಮಾಜಿಕ ಜಾಲತಣಾದಲ್ಲಿ ಹೆಚ್ಚು ಸಕ್ರಿಯ ಹಾಗೂ ಜನಪ್ರಿಯವಾಗಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಈ ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್‌ ಷಾ ಹೇಳಿದ್ದರು.

ಏಕಕಾಲಕ್ಕೆ ನಮ ಸಂದೇಶಗಳು 32 ಲಕ್ಷ ವಾಟ್‌್ಸಆ್ಯಪ್‌ ಚಂದಾದಾರನ್ನು ತಲುಪುತ್ತವೆ. ಅಲ್ಲಿಂದ ಮುಂದೂಡಲ್ಪಟ್ಟ ಸಂದೇಶಗಳು ಸರಿಸುಮಾರು 80 ಕೋಟಿ ಜನರಿಗೆ ಹಂಚಿಕೆಯಾಗುತ್ತವೆ ಎಂದು ಬಿಜೆಪಿ ನಾಯಕರು ಹೇಳಿದ್ದು, ನಮಗೆ ಮಾಧ್ಯಮಗಳ ಅವಶ್ಯಕತೆಯೇ ಇಲ್ಲ ಎಂದು ನೀಡಿದ ಹೇಳಿಕೆಯನ್ನು ಸರಿಸಿಕೊಂಡರು.

ಇಂದು ಒಂದು ಭಾಗವಾದರೆ ಮತ್ತೊಂದು ದಿಕ್ಕಿನಲ್ಲಿ ಮಾಧ್ಯಮಗಳು ತಮಷ್ಟಕ್ಕೇ ತಾವೇ ಅಪ್ರಸ್ತುತವಾಗುತ್ತಿವೆ. ಕಳೆದ ಹತ್ತು ವರ್ಷಗಳಿಂದಲೂ ಯಾವ ಹಗರಣದ ಬಗ್ಗೆಯೂ ಚರ್ಚೆಯಾಗಿಲ್ಲ. ಪ್ರೊಫೈಲ್‌, ನೋಟು ಅಮಾನೀಕರಣ, ಪಿಎಂ ಕೇಸ್‌‍, ಚೀನಾ ಗಡಿ ಒತ್ತುವರಿ ಸೇರಿ ಯಾವ ವಿಚಾರಗಳು ಮಾಧ್ಯಮಗಳ ಚರ್ಚೆಯ ವಸ್ತುವಾಗಿಲ್ಲ. ಕರ್ನಾಟಕ ನಕಲಿ ಸುದ್ದಿಗಳ ಫ್ಯಾಕ್ಟರಿಯಾಗಿದೆ. ಕೆಲವು ಮಾಧ್ಯಮಗಳಂತೂ ಜನರ ಬೌದ್ಧಿಕತೆ ಮೇಲೆಯೇ ದಾಳಿ ಮಾಡಿವೆ. ಹೀಗಾಗಿ ಜನರೂ ಕೂಡ ಮಾಧ್ಯಮಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ನಿಂತಿದೆ ಎಂದು ಹೇಳಿದರು.

ನಕಲಿ ಸುದ್ದಿಗಳ ಬಗ್ಗೆ ಪಠ್ಯಕ್ರಮದಲ್ಲಿ ವಿಷಯ ಅಳವಡಿಕೆಯಾಗಬೇಕು. ರಾಜ್ಯದ ಮಾಧ್ಯಮ ಸಂಸ್ಥೆಯವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಅಪಾಯಕಾರಿ ಪರಿಸ್ಥಿತಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಾರ್ತಾ ಇಲಾಖೆ ಆಯುಕ್ತ ಸೂರಳ್ಕರ್‌ ವಿಕಾಸ್‌‍ ಕಿಶೋರ್‌, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌, ಪ್ರೆಸ್‍ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.

RELATED ARTICLES

Latest News