ಬೆಂಗಳೂರು, ಸೆ.10- ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ಅವುಗಳಿಗೆ ತ್ವರಿತಗತಿಯಲ್ಲಿ ಮುಕ್ತಿ ನೀಡಲಾಗುತ್ತಿದೆ ಎಂದು ವಲಯ ಆಯುಕ್ತರಾದ ವಿನೋತ್ ಪ್ರಿಯಾ ತಿಳಿಸಿದರು.
ನಗರದ ಬಿಟಿಎಂ ಲೇಔಟ್ 2ನೇ ಹಂತದ ಬಳಿ ಇಂದು ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸಂಪೂರ್ಣ ಜವಾಬ್ದಾರಿ ನೀಡಿ ತಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಶೀಘ್ರಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ ಎಂದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ದಕ್ಷಿಣ ವಲಯ ವ್ಯಾಪ್ತಿಗೆ ಬರುವ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿರುವ ರಸ್ತೆಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದರು.
ಕೆಲಸ ನಿರ್ವಹಣೆಗಾಗಿ ಇಶ್ಯೂ ತಂತ್ರಾಂಶ:
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆಯಲ್ಲಿ ಹೂಳೆತ್ತುವ, ಕಟ್ಟಡ ಭಗ್ನಾವಶೇಷಗಳ ತೆರವು, ಮುರಿದಿರುವ ಸ್ಲ್ಯಾಬ್ಗಳ ತೆರವು, ಕಸ ಸುರಿಯುವ ಸ್ಥಳ, ನೀರು ನಿಲ್ಲುವ ಸ್ಥಳ, ರಸ್ತೆ ಗುಂಡಿ ಸೇರಿದಂತೆ ಇನ್ನಿತರೆ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಇಶ್ಯೂ ತಂತ್ರಾಂಶ ಸಿದ್ಧಪಡಿಸಿಕೊಂಡಿದ್ದು, ಅದರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ದಕ್ಷಿಣ ವಲಯದಲ್ಲಿ ರಸ್ತೆ ಗುಂಡಿ ಗಮನ ತಂತ್ರಾಶ, ಇಶ್ಯೂ ತಂತ್ರಾಂಶ ಹಾಗೂ ಸಹಾಯ 2.0 ತಂತ್ರಾಂಶದಲ್ಲಿ ಬರುವ ದೂರುಗಳಿಗೆ ಹೆಚ್ಚು ಆದ್ಯತೆ ನೀಡಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಏಪ್ರಿಲ್ 2024 ರಿಂದ 438 ದೂರುಗಳು ಬಂದಿದ್ದು, ಈಗಾಗಲೇ 379 ಗುಂಡಿಗಳನ್ನು ಮುಚ್ಚಲಾಗಿದೆ.
ಉಳಿದ 59 ಗುಂಡಿಗಳನ್ನು ಕೂಡಾ ತ್ವರಿತಗತಿಯಲ್ಲಿ ಮುಚ್ಚಲಾಗುವುದು. ಇನ್ನು ಇಶ್ಯೂ ತಂತ್ರಾಂಶದಲ್ಲಿ 750 ದೂರುಗಳ ಪೈಕಿ 599 ದೂರುಗಳನ್ನು ಬಗೆಹರಿಸಲಾಗಿದ್ದು, 151 ಗುಂಡಿಗಳನ್ನು ಮುಚ್ಚಬೇಕಿದೆ. ಸಹಾಯ 2.0 ಬಂದಿರುವ ಎಲ್ಲಾ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ನಾಗರೀಕರಿಂದ ಬರುವ ದೂರುಗಳು ಮಾತ್ರವಲ್ಲದೆ ಎಂಜಿನಿಯರ್‌ಗಳಿಂದ ಕೂಡಾ ರಸ್ತೆಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1746 ಕಿಮೀ ಉದ್ದದ ರಸ್ತೆಯಿದ್ದು, ಸಂಪೂರ್ಣ ಹಾಳಾಗಿರುವ ರಸ್ತೆಗಳನ್ನು ಡಾಂಬರೀಕರಣ ಮಾಡಲು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 75.30 ಕಿ.ಮೀ. ಉದ್ದದ ರಸ್ತೆಯಲ್ಲಿ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ದಕ್ಷಿಣ ವಲಯದ ಪ್ರಮುಖ ಅಂಶಗಳು
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 06
ವಾರ್ಡ್ ಗಳ ಸಂಖ್ಯೆ: 44
ವಾರ್ಡ್ ರಸ್ತೆಗಳ ಸಂಖ್ಯೆ: 10768
ವಾರ್ಡ್ ರಸ್ತೆಗಳ ಉದ್ದ: 1528.70 ಕಿ.ಮೀ.
ಪ್ರಮುಖ ರಸ್ತೆಗಳ ಸಂಖ್ಯೆ: 87
ಪ್ರಮುಖ ರಸ್ತೆಗಳ ಉದ್ದ: 218 ಕಿ.ಮೀ
ದಕ್ಷಿಣ ವಲಯ ವ್ಯಾಪ್ತಿಯ ರಸ್ತೆಗಳ
ಒಟ್ಟು ಉದ್ದ: 1746.70 ಕಿ.ಮೀ.