ಚಿಕ್ಕಮಗಳೂರು,ಡಿ.19- ಮಲೆನಾಡಿನ ಪ್ರತಿಭೆ ಉನ್ನತಿ ಈಗ ರಾಷ್ಟ್ರಮಟ್ಟದ ಬ್ಯಾಟ್‌ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ.ಮಧ್ಯಪ್ರದೇಶದಲ್ಲಿ ನಡೆದ 14 ವರ್ಷದೊಳಗಿನ ಬ್ಯಾಟ್‌ಮಿಂಟನ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಉನ್ನತಿ ರಾಜ್ಯಕ್ಕೆ ಮಲೆನಾಡಿನ ಹೆಮೆಯ ಕ್ರೀಡಾಪಟು.
ಈ ಹಿಂದೆ ರಾಜ್ಯದ ಚಾಂಪಿಯನ್ ಆಗಿದ್ದ ಉನ್ನತಿ ಚಿಕ್ಕಮಗಳೂರು ಜಿಲ್ಲೆಯಿಂದ ಮೊದಲ ಬಾರಿಗೆ ಬ್ಯಾಟ್‌ಮಿಂಟನ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಮಲೆನಾಡಿನಂತಹ ಪ್ರದೇಶದಲ್ಲಿ ಬ್ಯಾಟ್‌ಮಿಂಟನ್ ಕ್ರೀಡೆಯಲ್ಲಿ ಎತ್ತರದ ಸ್ಥಾನ ಗಳಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಯಾವುದೇ ಹಿನ್ನೆಲೆಯಿಲ್ಲದೆ, ಯಾವುದೇ ಸಂಸ್ಥೆಯ ನೆರವು ಪಡೆಯದ ಪ್ರತಿಭೆ ಉನ್ನತಿ ಮಲೆನಾಡಿಗೆ, ತಾನು ಓದಿದ ಶಾಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಚಿಕ್ಕಮಗಳೂರಿನ ಶೃಂಗೇರಿಯ ಒಂದು ಹಿಂದುಳಿದ ಸಮುದಾಯದ ಉನ್ನತಿಯ ತಂದೆ ನವೀನ್ ತಮ ದೈನಂದಿನ ಬದುಕಿಗೆ ಸಣ್ಣದೊಂದು ಸಲೂನ್ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದಾರೆ.
ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರೊಂದಿಗೆ ತನ್ನ ನಿತ್ಯದ ದುಡಿಮೆಯ ಹಣದಿಂದಲೇ ಚಿಕ್ಕ ವಯಸ್ಸಿನಿಂದಲೇ ಮಲೆನಾಡಿನಲ್ಲಿ ಬ್ಯಾಟ್‌ಮಿಂಟನ್ ತರಬೇತಿ ಕೊಡಿಸಿ ಇಂದು ರಾಷ್ಟ್ರಮಟ್ಟದವರೆಗೆ ಕೊಂಡೊಯ್ದಿರುವುದು ಸುಲಭದ ಮಾತಲ್ಲ.
ಉನ್ನತಿಯ ಈ ಪ್ರತಿಭೆಗೆ ನೀರೆರೆದು ಪೋಷಿಸಿದ ತಂದೆ ನವೀನ್ ತಾಯಿ ಅಕ್ಷತಾ ಹಾಗೂ ತರಬೇತಿದಾರರಾದ ಸಂತೋಷ್ ಶೆಟ್ಟಿ ಹಾಗೂ ಯತಿನ್ ಶೆಟ್ಟಿಯವರು ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಿಂದ ಮೊದಲ ಬಾರಿಗೆ ಈ ಸಾಧನೆ ಮಾಡುವ ಮೂಲಕ ಮಲೆನಾಡಿಗೆ, ರಾಜ್ಯಕ್ಕೆ ತಾನು ಓದುತ್ತಿರುವ ಶಾಲೆಗೆ ಕೀರ್ತಿ ತಂದಿದ್ದಾಳೆ. ಉನ್ನತಿಯ ಈ ಸಾಧನೆಗೆ ಎಲ್ಲೆಡೆ ಅಭಿನಂದನೆ ವ್ಯಕ್ತವಾಗಿದೆ.
