ಕೋಲ್ಕತಾ,ಡಿ.13- ಇಲ್ಲಿ ಇಂದು ಆಯೋಜಿಸಲಾಗಿರುವ ಅಜೆಂಟೀನಾದ ಸೂಪರ್‌ಸ್ಟಾರ್ ಫುಟ್‌ಬಾಲ್ ಪಟು ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮಕ್ಕಾಗಿ ಮಾಡಿರುವ ಪೂರ್ವಸಿದ್ಧತೆಗಳ ಕುರಿತು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಾಜ್ಯಸರ್ಕಾರದಿಂದ ವಿಸ್ತೃತ ವರದಿ ಕೇಳಿದ್ದಾರೆ ಎಂದು ಲೋಕಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತಕ್ಕೆ ಫುಟ್‌ಬಾಲ್ ತಾರೆ ಅವರ ಆಗಮನ ಸಂಚಲನ ಸೃಷ್ಟಿಸಿದ್ದು ಅವರನ್ನು ಕಣ್ತುಂಬಿಕೊಳ್ಳಲು ಫುಟ್‌ಬಾಲ್ ಪ್ರೇಮಿಗಳು ಮುಗಿಬಿದ್ದಿದ್ದಾರೆ.ಈ ಸನ್ನಿವೇಶದ ಲಾಭ ಮಾಡಿಕೊಳ್ಳುತ್ತಿರುವ ಕಾಳಸಂತೆಕೋರರು ಟಿಕೆಟ್ ಬೆಲೆಯನ್ನು ಹಲವಾರು ಪಟ್ಟು ಏರಿಸಿದ್ದು ಎಷ್ಟೋ ಜನರಿಗೆ ದುಬಾರಿ ದರ ತೆರಲಾಗದೆ ಮೆಸ್ಸಿಯನ್ನು ಮಿಸ್ ಮಾಡಿಕೊಳ್ಳುವಂತಾಗಿದೆ.
ಮೆಸ್ಸಿ ಅವರು ಇಲ್ಲಿನ ಸಾಲ್‌್ಟಲೇಕ್ ಸ್ಟೇಡಿಯಂನಲ್ಲಿ ಸಂಗೀತ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಮೋಹನ್‌ಬಾಗನ್ ಮೆಸ್ಸಿ ಆಲ್ ಸ್ಟಾರ್‌ರಸ ಮತ್ತು ಡೈಮಂಡ್ ಹಾರ್ಬರ್ ಮೆಸ್ಸಿ ಆಲ್‌ಸ್ಟಾರ್‌ರಸ ತಂಡಗಳ ನಡುವೆ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.
ತಮ ನೆಚ್ಚಿನ ತಾರೆಯನ್ನು ಕಾಣುವ ಅವಕಾಶ ತಪ್ಪಿಹೋಗುತ್ತಿರುವುದಕ್ಕೆ ಬೇಸರಗೊಂಡ ಅಭಿಮಾನಿಗಳಿಂದ ಲೋಕಭವನಕ್ಕೆ ದೂರುಪತ್ರಗಳ ಮಹಾಪೂರವೇ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಸಾಮಾನ್ಯರಿಗೆ ಕೈಗೆಟುಕದಂತೆ ಟಿಕೆಟ್ ದರ ಏರಿಸಿರುವುದೇಕೆ? ತಮ ನೆಚ್ಚಿನ ಫುಟ್‌ಬಾಲ್ ಸ್ಟಾರ್‌ನ ದರ್ಶನಕ್ಕಾಗಿ ಹಾತೊರೆಯುತ್ತಿರುವ ಅಭಿಮಾನಿಗಳಿಗೆ ಏಕೆ ತೊಂದರೆ ನೀಡಲಾಗುತ್ತಿದೆ? ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
ಅರ್ಜೆಂಟೀನಾದ ಸಮಕಾಲೀನ ಫುಟ್‌ಬಾಲ್ ದಿಗ್ಗಜನ ಕಾರ್ಯಕ್ರಮದ ಟಿಕೆಟ್‌ಗಳ ದರ ಗಗನಕ್ಕೇರಿರುವುದು ತಮಗೆ ಆಘಾತ ಉಂಟುಮಾಡಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.
