ಕೋಲ್ಕತ್ತಾ,ಡಿ.13- ಫುಟ್ಬಾಲ್ ಲೋಕದ ದೈತ್ಯ ಮೆಸ್ಸಿಯವರನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ ಮಾಡಿದ್ದಾರೆ. ಅರ್ಜೆಂಟೀನಾದ ಪುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಭಾರೀ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು ಆಟಗಾರನನ್ನು ಕ್ಷಣಹೊತ್ತು ಕೂಡ ಕಣ್ತುಂಬಿಕೊಳ್ಳಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕೈಗೆ ಸಿಕ್ಕ ಕುರ್ಚಿ ಹಾಗೂ ವಸ್ತುಗಳನ್ನು ಪುಡಿಪುಡಿ ಮಾಡಿದ ಘಟನೆ ನಡೆದಿದೆ.
ಇದರಿಂದ ಕ್ರೀಡಾಂಗಣ ಅಕ್ಷರಶಃ ರಣರಂಗದಂತೆ ಮಾರ್ಪಟ್ಟಿದೆ. ಲಿಯೋನೆಲ್ ಮೆಸ್ಸಿ ಇಂದು ಬೆಳಿಗ್ಗೆ 11.30ರ ಸುಮಾರಿಗೆ ವಿವೇಕಾನಂದ ಯುವಭಾರತಿ ಕ್ರೀಡಾಂಗಣಕ್ಕೆ ಸ್ಟ್ರೈಕರ್ ಲೂಯಿಸ್ ಸುವಾರೇಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೋಡ್ರಿಗೊ ಡಿ ಪಾಲೊ ಅವರೊಂದಿಗೆ ಆಗಮಿಸಿದರು.
ಮೈದಾನಕ್ಕೆ ಬಂದ ಅವರು ಅಲ್ಲಿ ಸ್ವಲ್ಪ ಹೊತ್ತು ಓಡಾಡಿ ಜನ ಸಮುದಾಯದತ್ತ ಕೈ ಬೀಸಿದರು. ಅವರ ಸುತ್ತಮುತ್ತ ಸಂಘಟಕರು, ವಿಐಪಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಸುತ್ತುವರೆದಿದ್ದರು. ಇದರಿಂದ ಮೆಸ್ಸಿಯನ್ನು ನೋಡಲು ಗ್ಯಾಲರಿಯಲ್ಲಿದ್ದ ಪ್ರೇಕ್ಷಕರಿಗೆ ಸಾಧ್ಯವಾಗಲೇ ಇಲ್ಲ.ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದರೂ ನೇರವಾಗಿ ಅಥವಾ ಕ್ರೀಡಾಂಗಣದ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗದ ಕಾರಣ ರೊಚ್ಚಿಗೆದ್ದ ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಮೈದಾನಕ್ಕೆ ನುಗ್ಗಿ ಬಾಟಲ್‌ಗಳನ್ನು ಎಸೆದು ಗ್ಯಾಲರಿಗಳಲ್ಲಿದ್ದ ಬ್ಯಾನರ್, ಹೋರ್ಡಿಂಗ್‌ಗಳು ಮತ್ತು ಕುರ್ಚಿಗಳನ್ನು ಹಾನಿಗೊಳಿಸಿದರು.
ಗ್ಯಾಲರಿಯ ಬ್ಯಾರಿಕೇಡ್‌ಗಳನ್ನು ತಳ್ಳಿ ಮೈದಾನದೊಳಕ್ಕೆ ನುಗ್ಗಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಪರಿಸ್ಥಿತಿ ನಿರ್ಮಾಣವಾದ ಕಾರಣ ಕೆಲವೇ ಹೊತ್ತಿನಲ್ಲಿ ಮೆಸ್ಸಿ ಮೈದಾನದಿಂದ ನಿರ್ಗಮಿಸಬೇಕಾಯಿತು.
