Saturday, August 16, 2025
Homeರಾಜ್ಯಬೆಂಗಳೂರಿನಾದ್ಯಂತ ಶ್ರೀಕೃಷ್ಣಜನಾಷ್ಟಮಿ ಸಡಗರ

ಬೆಂಗಳೂರಿನಾದ್ಯಂತ ಶ್ರೀಕೃಷ್ಣಜನಾಷ್ಟಮಿ ಸಡಗರ

Sri Krishna Janashtami celebrations across Bengaluru

ಬೆಂಗಳೂರು, ಆ-16, ನಾಡಿನ ಎಲ್ಲೆಡೆ ಇಂದು ಶ್ರೀಕೃಷ್ಣ ಸಂಭ್ರಮ ಮನೆಮಾಡಿತ್ತು. ರಾಜಾಜಿನಗರದ ಇಸ್ಕಾನ್‌ ದೇವಾಲಯಕ್ಕೆ ಜನಸಾಗರವೇ ಹರಿದುಬಂದಿತ್ತು. ಇಸ್ಕಾನ್‌ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ರಾಧಾ ಕೃಷ್ಣ ದೇವರನ್ನು ಕಣ್ತುಂಬಿಕೊಂಡರು.

ದೇವಾಲಯದ ಆಡಳಿತ ಮಂಡಳಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ದೇವರ ದರ್ಶನ, ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಗಳು ಸಂಜೆವರೆಗೂ ಜರುಗಲಿವೆ. ಇದೇ ರೀತಿ ಬೆಂಗಳೂರಿನ ಶ್ರೀಕೃಷ್ಣನ ದೇವಾಲಯಗಳ ಪೂಜೆ ಪುರಸ್ಕಾರಗಳು ನೆರವೇರಿದವು. ಎಲ್ಲೆಡೆ ಹರೇ ರಾಮ ಹರೇ ಕೃಷ್ಣ ವೇದಘೋಷಗಳು ಮೊಳಗಿದವು. ಮಕ್ಕಳು ರಾಧಾ ಕೃಷ್ಣ ವೇಷಧಾರಿಗಳಾಗಿ ಸಂಭ್ರಮಿಸಿದರು.

ಕೆ.ಆರ್‌.ಪುರದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಅದ್ಧೂರಿ ಶ್ರೀ ಕೃಷ್ಣ ಜನಾಷ್ಟಮಿ ಕೆಆರ್‌ ಪುರ, ಆ.16- ಕೆಆರ್‌ ಪುರದ ದೇವಸಂದ್ರದಲ್ಲಿ ಅನಾದಿಕಾಲದಿಂದ ನೆಲೆಸಿರುವ ಶ್ರೀ ರಾಧ ರುಕ್ಮಿಣಿ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಜರುಗಿತು.

ಬೆಳಗ್ಗೆ 6 ಗಂಟೆಗೆ ಸುಪ್ರಭಾತ, ಅನುಜ್ಞೆ, ವಿಶ್ವಕ್ಷೇನಾ ಆರಾಧನೆ, ಭಗವತ್‌ ಪುಣ್ಯಾಹ ವಚನ, ಋತ್ವಿಗಾವರಣ, ರಕ್ಷಾ ಬಂಧನ, ಅನಿರ್ವಾಣ, ದೀಪಾರೋಹಣ, ದ್ವಾರತೋರಣ, ಯಾಗಶಾಲಾ ಪ್ರವೇಶ , ಅಗ್ನಿಪ್ರತಿಷ್ಠೆ, ಶ್ರೀ ಸುದರ್ಶನ ಹೋಮ, ಶ್ರೀ ಕೃಷ್ಣ ದ್ವಾದಶಕ್ಷರಿ, ಗಾಯಿತ್ರಿಹೋಮ, ಶ್ರೀಮಹಾ ಗಣಪತಿ ಹೋಮ, ನವಗ್ರಹ ಹೋಮ, ಶಾಂತಿ ಹೋಮ, ಪಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಅಷ್ಠವಧಾನ, ಮಹಾ ನಿವೇದನೆ ಬಲಹರಣ ಕಾರ್ಯಕ್ರಮಗಳು ಜರುಗಿದವು. ಅಭಿಜಿತ್‌ ಮುಹೂರ್ತ ದಲ್ಲಿ ಮಧ್ಯಾಹ್ನ 11.55 ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ಕೃಷ್ಣ ಭಗವಾನರ ಉ್ಯಾಲೋತ್ಸವ ಮತ್ತು ರಾತ್ರಿ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ.ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಡಿ.ಟಿ. ಶ್ರೀನಿವಾಸ್‌ರವರು ಕುಟುಂಬ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು. ಬಳಿಕ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್‌‍, ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಅದ್ಧೂರಿಯಾಗಿ ಆಚರಿಸಿ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸುತ್ತಾ ಬಂದಿದ್ದೇವೆ, ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಂಟ್ರಾಕ್ಟರ್‌ ಚಲಪತಿ, ಬ್ರಿಜೇಶ್‌‍, ವಿನಿಶಾ ಮತ್ತಿತರರು ಹಾಜರಿದ್ದರು.


RELATED ARTICLES

Latest News