Thursday, April 10, 2025
Homeರಾಷ್ಟ್ರೀಯ | Nationalತಮಿಳುನಾಡಿನ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾ ಪಡೆ

ತಮಿಳುನಾಡಿನ 35 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾ ಪಡೆ

ರಾಮನಾಥಪುರಂ,ಆ.10- ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್‌ನ ಸುಮಾರು 35 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಪಂಬನ್‌ ಮೀನುಗಾರರು ಮೀನುಗಾರಿಕೆಗೆ ಬಳಸುತ್ತಿದ್ದ 4 ದೇಶದ ದೋಣಿಗಳನ್ನು ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು (ಐಎಂಬಿಎಲ್‌) ಉಲ್ಲಂಘಿಸಿದ ಆರೋಪದ ಮೇಲೆ ವಶಪಡಿಸಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಂಕಾದ ವಾಯವ್ಯ ಸಮುದ್ರದಲ್ಲಿ ಮನ್ನಾರ್‌ನ ದಕ್ಷಿಣಕ್ಕೆ ಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ಲಂಕಾ ನೌಕಾಪಡೆ ಬಂಧಿಸಿದೆ. ನಂತರ ಕಲ್ಪಿಟಿಯ ಮೀನುಗಾರಿಕಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಹಿಂದೆ ಬಂಧಿತರಾಗಿದ್ದ 13 ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.

ಬಂಧನವನ್ನು ಖಂಡಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಪದೇ ಪದೇ ಮೀನುಗಾರರ ಬಂಧನಕ್ಕೆ ಶಾಶ್ವತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಈ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರದ ಡಿಎಂಕೆ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

ಮೀನುಗಾರರು ಮತ್ತು ಅವರ ವಸ್ತುಗಳನ್ನು ಬಿಡುಗಡೆ ಮಾಡಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ಚುನಾವಣಾ ಸಮಯದಲ್ಲಿ ಕಚ್ಚತೀವು (ಲಂಕಾಗೆ ಬಿಟ್ಟುಕೊಟ್ಟ) ದ್ವೀಪದ ಬಗ್ಗೆ ಮಾತನಾಡಬೇಡಿ. ತಮಿಳುನಾಡು ಮೀನುಗಾರರು ಸಹ ಭಾರತೀಯರು ಎಂಬುದನ್ನು ನೆನಪಿನಲ್ಲಿಡಿ ಎಂದು ಪಳನಿಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.

RELATED ARTICLES

Latest News