ಶ್ರೀ ಜಗದ್ಗುರು ಶಂಕರಾಚಾರ್ಯರರು ಹಿಂದೂ ಧರ್ಮವನ್ನು ಪುನರುದ್ಧರಿಸ ಲೋಸುಗವೇ ಜನಿಸಿದ ಭಗವಾನ್ ಶಂಕರನ ಅಂಶಾವತಾರಿಗಳು ಎಂದು ಪ್ರತೀಕ. ಆದ್ದರಿಂದ ಆದಿಶಂಕರ ಭಗವತ್ಪಾದರು ಎಂದೇ ಜನಜನಿತರಾಗಿದ್ದಾರೆ. ಹಿಂದೂ ಧರ್ಮ ಪತಾಕೆಯನ್ನು ಎತ್ತಿ ಹಿಡಿದು ಅಪಾರ ಸ್ತೋತ್ರವ್ಮಾ ಯವನ್ನು ರಚಿಸಿ, ಹಲವಾರು ದೇಗುಲಗಳನ್ನು ನಿರ್ಮಿಸಿ ಧರ್ಮರಕ್ಷಣೆ ಮಾಡಿದ ಅವತಾರವರಿಷ್ಠರು ಶಂಕರರು.
ಕೇರಳದ ಕಾಲಡಿ ಎಂಬಲ್ಲಿ ಕ್ರಿ.ಶ. 788ರಲ್ಲಿ ಜನಿಸಿದ ಶಂಕರರು ಜನ್ಮತಃ ಅಧ್ಯಾತ್ಮಜೀವಿ. ಐದನೇ ವಯಸ್ಸಿನಲ್ಲಿ ಒಮ್ಮೆ ನದಿಗೆ ತೆರಳಿದ್ದ ಬಾಲ ಶಂಕರರ ಕಾಲನ್ನು ಮೊಸಳೆ ಹಿಡಿದುಕೊಳ್ಳುತ್ತದೆ. ತಾಯಿ ಆತಂಕದಿಂದ ಕೂಗಿಕೊಳ್ಳತೊಡಗು ತ್ತಾರೆ. ಆಗ ಶಂಕರರು ನನ್ನನ್ನು ಸನ್ಯಾಸಿಯಾಗಲು ಬಿಟ್ಟರೆ ಈ ಮೊಸಳೆ ನನ್ನನ್ನು ಬಿಡುತ್ತದೆ ಎಂದರಂತೆ. ಬೇರೆ ವಿ„ಯಿಲ್ಲದೆ ಶಂಕರರ ತಾಯಿ ಒಪ್ಪಿಗೆ ಸೂಚಿಸುತ್ತಾರೆ. ಆಗ ಮೊಸಳೆ ಶಂಕರರನ್ನು ಬಿಟ್ಟು ಹೋಗುತ್ತದೆ. ಆಧ್ಯಾತ್ಮಿಕ ಜಗತ್ತನ್ನು ಶಂಕರರು ಪ್ರವೇಶಿಸುತ್ತಾರೆ.
ಬಾಲಸೂರ್ಯನಂತೆ ಪ್ರಜ್ವಲಿಸುತ್ತ ಬೆಳೆಯುವ ಶಂಕರರು ಪ್ರಖರ ವಿದ್ವನ್ಮಣಿಯೆನಿಸಿಕೊಳ್ಳುತ್ತಾರೆ. ಜೊತೆಗೆ ಅನೇಕ ಪವಾಡಗಳನ್ನು ನಡೆಸುತ್ತಾರೆ. ಅವರು ರಚಿಸಿರುವ ಸ್ತೋತ್ರಗಳು ಮಹಿಮೆಯಲ್ಲಿ, ಪ್ರಾಮುಖ್ಯದಲ್ಲಿ ಇಂದಿಗೂ ಧಾರ್ಮಿಕ ಪ್ರಪಂಚದಲ್ಲಿ ಅಗ್ರಪಂಕ್ತಿಯಲ್ಲಿವೆ. ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ ಎಂದು ಪ್ರಾಪಂಚಿತರನ್ನು ಭಗವಂತನ ನಾಮ ಸ್ಮರಣೆಯತ್ತ ಪ್ರೇರೇಪಿಸಿದರು.
ಅವರು ರಚಿಸಿ ಸೌಂದರ್ಯಲಹರಿ ಸ್ತೋತ್ರ ಶ್ರೀವಿದ್ಯೆಯಲ್ಲಿ ಆದ್ಯಸ್ತೋತ್ರವೆನಿಸಿದೆ. ಇದು 100 ಶ್ಲೋಕಗಳನ್ನು ಒಳಗೊಂಡಿದ್ದು ಮೊದಲ 42 ಸ್ತೋತ್ರಗಳು ಆನಂದಲಹರಿ ಎಂದೂ ಉಳಿದ 58 ಸ್ತೋತ್ರಗಳು ಸೌಂದರ್ಯಲಹರಿ ಎಂದು ಪ್ರಸಿದ್ಧವಾಗಿವೆ. ಈ ಶ್ಲೋಕಗಳಲ್ಲಿ ದೇವಿಯ ಮಹಿಮೆಯ ವರ್ಣನೆಗಳನ್ನು, ಶ್ರೀವಿದ್ಯೆಯ ನಿಗೂಢ ಆಧ್ಯಾತ್ಮಿಕ ರಹಸ್ಯಗಳನ್ನು ಅಮೂಲಾಗ್ರವಾಗಿ ಒಳಗೊಂಡಿದೆ.
ಅದೇ ರೀತಿ ಶ್ರೀ ಶ್ಯಾಮಲಾನವರತ್ನ ಮಾಲಿಕಾ ಸ್ತೋತ್ರ ಕೂಡ ಶಂಕರರಿಂದಲೇ ರಚನೆಗೊಂಡಿದ್ದು ಜನಪ್ರಿಯವಾಗಿದೆ.
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠದೇ ಶಯನಂ
ಕುಪೋತ್ತೋ ಜಾಯತೇ ಕ್ವಚಿತ್
ಕ್ವಚಿದಪಿ ಕುಮಾತಾ ನ ಭವತಿ
ಎಂಬ ಶಂಕರಾಚಾರ್ಯರ ನುಡಿಗಳು ಬಹು ಪ್ರಸಿದ್ಧ.
ಮೊದಲ ನುಡಿಯು ಹಿಂದೂ ಧರ್ಮದ ಪುನರ್ಜನ್ಮ ಸಿದ್ಧಾಂತವನ್ನು ಅತ್ಯಂತ ಸ್ಪಷ್ಟವಾಗಿ ಅರುಹಿದರೆ ಎರಡನೇ ನುಡಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಇರುವುದಿಲ್ಲ ಎಂದು ವಿವರಿಸುತ್ತದೆ. ಅಂದರೆ ಶಂಕರಾಚಾರ್ಯರು ಅಸೀಮ ಮಾತೃಭಕ್ತಿಯೇ ಇಲ್ಲಿ ಅನಾವರಣಗೊಂಡಿದೆ. ವಿಶ್ವ ತಾಯಂದಿರ ದಿನವಾದ ಇಂದಿನ ಸಂದರ್ಭದಲ್ಲಿ ಶಂಕರಾಚಾರ್ಯರ ಈ ಹೇಳಿಕೆಯನ್ನು ನೆನಪಿಸಿಕೊಳ್ಳುವುದು ಸೂಕ್ತ.
ಮನವನ ಕಾರಣಂ ಬಂಧಮೋಕ್ಷಯೇಃ ಎನ್ನುವ ಶಂಕರಾಚಾರ್ಯರು ಬಂಧನಕ್ಕೂ ಬಿಡುಗಡೆಗೂ ಮನಸ್ಸೇ ಕಾರಣ ಎನ್ನುತ್ತಾರೆ.
ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು ಭಾರತÀದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲೇ ಸಂಚರಿಸಿ ನಾಲ್ಕು ಕಡೆ ಆಮ್ನಾಯ ಮಠಗಳ ಸ್ಥಾಪನೆ ಮಾಡಿದ್ದಾರೆ. ಕರ್ನಾಟಕದ ಶೃಂಗೇರಿಯಲ್ಲಿ, ಪುರಿಯಲ್ಲಿ, ದ್ವಾರಕದಲ್ಲಿ ಹಾಗೂ ಬದರಿಯಲ್ಲಿ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿದ್ದಾರೆ. ಶೃಂಗೇರಿ ಸಮೀಪವೇ ಇರುವ ಹರಿಹರಪುರ ಸಹ ಶ್ರೀ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಸುಕ್ಷೇತ್ರವಾಗಿದೆ.
ಮಹಾಭಾರತದಿಂದ ಭಗವದ್ಗೀತೆಯನ್ನು ಪೃಥಕ್ಕರಿಸಿ ಭಾಷ್ಯ ಬರೆದು ಪ್ರಚುರಪಡಿಸಿದರು. ಸಾವಿರಾರು ಸ್ತೋತ್ರಗಳನ್ನು ರಚಿಸಿ ಜನತೆಯಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನುಂಟುಮಾಡಿದರು. ಕೇವಲ ಮೂವತ್ತಮೂರು ವರ್ಷಗಳು ಕಾಲ ಭೌತಿಕ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದು, ಶಂಕರಾಚಾರ್ಯರು ಈ ಕಿರಿವಯಸ್ಸಿಗೇ ಶತಮಾನಗಳಷ್ಟು ಕಾಲವಾದರೂ ಅಸಾಧ್ಯವೆನಿಸುವ ಅಗಾಧ ಸಾಧನೆ ಮಾಡಿ ಅಚ್ಚಳಿಯದೆ ಉಳಿದಿದ್ದಾರೆ.
ವಿಶಿಷ್ಟಾದ್ವೈತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರು
ಸನಾತನ ಧರ್ಮದಲ್ಲಿ ಆದಿ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರು ಆಚಾರ್ಯತ್ರಯರೆಂದೇ ಖ್ಯಾತಿವೆತ್ತಿದ್ದಾರೆ. ಇವರಲ್ಲಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು, ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ ದ್ದಾರೆ. ಪರಮಾತ್ಮನು ಬಿಂಬವಾದರೆ ಜೀವಾತ್ಮನು ಆತನ ಪ್ರತಿಬಿಂಬ ಎನ್ನುವುದು ವಿಶಿಷ್ಟಾದ್ವೈತ ಸಿದ್ದಾಂತದ ಮೂಲ ತಿರುಳು.
ರಾಮಾನುಜಾಚಾರ್ಯರಿಗೆ ಅವರ ಗುರುಗಳು ಮಂತ್ರೋಪದೇಶ ಮಾಡಿ ಅದನ್ನು ಗೌಪ್ಯವಾಗಿ ಇರಿಸಿಕೊಳ್ಳಲು ಸೂಚಿಸುತ್ತಾರೆ. ಆಗ ರಾಮಾನುಜರು ಒಂದು ಗುಡ್ಡವನ್ನೇರಿ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಆ ಮಂತ್ರವನ್ನು ಉಚ್ಚರಿಸಿ ಬಿಡುತ್ತಾರೆ. ಎಲ್ಲರೂ ಮೋಕ್ಷಕ್ಕೆ ಅರ್ಹರೇ ಅಲ್ಲವೇ ಎಂದು ಗುರುಗಳನ್ನು ಪ್ರಶ್ನಿಸುತ್ತಾರೆ.
ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ತಮ್ಮ 120 ವರ್ಷಗಳ ಸಾರ್ಥಕ ಜೀವನದಲ್ಲಿ ಧರ್ಮ ಪ್ರಚಾರ ಮಾಡಿದರು. ಅವರು ಆರಂಭಿಸಿದ ವೈರಮುಡಿ ಉತ್ಸವ ರಾಜಮುಡಿ ಉತ್ಸವಗಳು ಇಂದಿಗೂ ಪ್ರಸಿದ್ಧ.