ಬೆಂಗಳೂರು,ಫೆ.9– ರಾಜ್ಯ ಬಿಜೆಪಿಯೊಳಗಿನ ಭಿನ್ನಮತ ನಿರ್ಣಾಯಕ ಘಟ್ಟ ತಲುಪಿದ್ದು, ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುನಿಸಿಕೊಂಡಿರುವ ಶ್ರೀರಾಮುಲು ಅವರು ನಾಳೆ ನವದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಮತ್ತಿತರರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಳೆದ ವಾರ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರಬಂಗಾರಪ್ಪ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಕೆಲವರು ದೆಹಲಿಗೆ ಭೇಟಿ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೊರತುಪಡಿಸಿ ಬೇರೆ ನಾಯಕರನ್ನು ಭೇಟಿ ಮಾಡದೆ ಬರಿಗೈಯಲ್ಲಿ ಹಿಂತಿರುಗಿದ್ದರು. ಇದು ಅವರಿಗೆ ವೈಯಕ್ತಿಕವಾಗಿ ತೀವ್ರ ಹಿನ್ನಡೆ ಉಂಟು ಮಾಡಿತ್ತು.
ನವದೆಹಲಿಗೆ ತೆರಳುವ ಮುನ್ನ ದಾವಣಗೆರೆ ಜಿ.ಎಂ.ಸಿದ್ದೇಶ್ವರ ಅವರ ಅತಿಥಿಗೃಹದಲ್ಲಿ ಸಭೆ ಸೇರಿದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಸಂಜೆ ದೆಹಲಿಗೆ ತೆರಳಲಿದ್ದಾರೆ.
ಸೋಮವಾರ ಸಂಸತ್ ಅಧಿವೇಶನದಲ್ಲಿ ವರಿಷ್ಠರನ್ನು ಭೇಟಿಯಾಗಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಿ ಪಕ್ಷ ನಿಷ್ಠೆ ಹಾಗೂ ಸಂಘ ಪರಿವಾರಕ್ಕೆ ಹತ್ತಿರ ಇರುವವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಮುಂದಿಡಲಿದ್ದಾರೆ.
ಈ ಹಿಂದೆಯೂ ವಿಜಯೇಂದ್ರ ನಾಯಕತ್ವಕ್ಕೆ ಅಪಸ್ವರ ಎತ್ತಿದ್ದರಾದರೂ ಹೈಕಮಾಂಡ್ನಿಂದ ಭಿನ್ನಮತೀಯರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಕ್ಕಿರಲಿಲ್ಲ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ನಾಯಕರು ಕರ್ನಾಟಕದ ಭಿನ್ನಮತವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಎಂದೇ ಹೇಳಲಾಗುತ್ತಿದೆ.
ಈ ವರ್ಷದ ನವೆಂಬರ್ನಲ್ಲಿ ಬಿಹಾರ ಹಾಗೂ ಮುಂದಿನ ವರ್ಷ ಉತ್ತರಪ್ರದೇಶ ಮತ್ತು ಉತ್ತರಖಂಡ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಮೂರು ರಾಜ್ಯಗಳಿಗೂ ಹೆಚ್ಚಿನ ಗಮನ ಹರಿಸಿದ್ದಾರೆ.ಹಾದಿಬೀದಿ ರಂಪಾಟ ಮಾಡುವ ಬದಲು ಬಿಜೆಪಿಯ ಭಿನ್ನಮತವನ್ನು ಶಮನ ಮಾಡಲು ವರಿಷ್ಠರು ಈಗಲಾದರೂ ಮುಂದಾಗಬೇಕೆಂಬುದು ಕಾರ್ಯಕರ್ತರ ಅಳಲು.
ಶ್ರೀರಾಮುಲುಗೆ ಬುಲಾವ್:
ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಅಧಿವೇಶನದ ಸಂದರ್ಭದಲ್ಲಿ ಭೇಟಿಯಾಗಿ, ಚರ್ಚೆ ಮಾಡಲು ಅಮಿತ್ ಶಾ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಬಿಜೆಪಿ ನಾಯಕರ ವಿರುದ್ಧ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಮೇಲೂ ಸಿಟ್ಟಾಗಿದ್ದಾರೆ. ಈ ವೇಳೆ ಅಮಿತ್ ಶಾ ಜೊತೆಗಿನ ಶ್ರೀರಾಮಲು ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.
ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಬಿ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದರು. ಈ ವಿಚಾರವನ್ನು ರಾಜ್ಯಾಧ್ಯಕರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳರೋದು ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ ಎಂದು ಬೇಸರ ಹೊರ ಹಾಕಿದ್ದರು.
ಇದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಕೂಡ ಶ್ರೀರಾಮುಲುಗೆ ಟಾಂಗ್ ಕೊಟ್ಟಿದ್ದರು. ಕ್ರೈಮ್ನಲ್ಲಿದ್ದವನನ್ನು ಒಳ್ಳೆಯ ರಾಜಕಾರಣಿಯಾಗಿ ಮಾಡಿದ್ದು ನಾನು ಮಾಡಿದ ಅನ್ಯಾಯನಾ? ಎಂದು ಪ್ರಶ್ನಿಸಿದ್ದರು. ರಾಜ್ಯದ ಮುಖ್ಯಮಂತ್ರಿಗಳೇ ಬಂದು ಅಲ್ಲೇ ಪ್ರಚಾರ ಮಾಡಿ ಹಣ ಖರ್ಚು ಮಾಡಿದರು. ಅದಕ್ಕೆ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು. ಶ್ರೀರಾಮುಲು ಮೇಲೆ ನನಗೆ ಚಾಡಿ ಹೇಳುವ ಅವಶ್ಯಕತೆ ಇಲ್ಲ. ಶ್ರೀರಾಮುಲು ನನ್ನ ಕುಟುಂಬದ ಮೇಲೆ ಯಾಕೆ ಜನಾರ್ದನ್ ರೆಡ್ಡಿ ಈ ರೀತಿ ಮಾತಾಡಿದ್ದಾರೋ ಎಂದು ಗೊತ್ತಿಲ್ಲ ಎಂದಿದ್ದಾರೆ. ಬಳ್ಳಾರಿ ಸೇರಿ ಕರ್ನಾಟಕಕ್ಕೆ ಜನಾರ್ದನ್ ರೆಡ್ಡಿ ಏನು ಎಂಬುದು ಗೊತ್ತು ಎಂದು ಶ್ರೀರಾಮುಲುಗೆ ತಿರುಗೇಟು ನೀಡಿದ್ದರು.