Tuesday, October 7, 2025
Homeರಾಜ್ಯBIG NEWS : ವಿದ್ಯಾರ್ಥಿಗಳು-ಪೋಷಕರಿಗೆ ಗ್ಯಾರಂಟಿ ಸರ್ಕಾರದಿಂದ ಶಾಕ್ : SSLC ಪರೀಕ್ಷಾ ಶುಲ್ಕ ಹೆಚ್ಚಳ

BIG NEWS : ವಿದ್ಯಾರ್ಥಿಗಳು-ಪೋಷಕರಿಗೆ ಗ್ಯಾರಂಟಿ ಸರ್ಕಾರದಿಂದ ಶಾಕ್ : SSLC ಪರೀಕ್ಷಾ ಶುಲ್ಕ ಹೆಚ್ಚಳ

SSLC exam fee hiked by 5%

ಬೆಂಗಳೂರು,ಅ.7- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌‍ಎಸ್‌‍ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ, ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ನೀಡಿದೆ.
ಈ ಬದಲಾವಣೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಈ ಹೊಸ ಶುಲ್ಕ ವಿನ್ಯಾಸವು ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಬರುವ ನಿಯಮಿತ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹಳೆಯ 676 ರೂ.ಗಳಿಂದ 710 ರೂ.ಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕದಲ್ಲೂ ಏರಿಕೆ ಮಾಡಲಾಗಿದೆ.

ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ, ನೋಂದಣಿ ಮತ್ತು ಅರ್ಜಿ ಶುಲ್ಕವನ್ನು 236 ರೂ.ಗಳಿಂದ 248 ರೂ.ಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ಈಗಾಗಲೇ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69 ರೂ.ನಿಂದ 72 ರೂ.ಗೆ ಹೆಚ್ಚಾಗಿದೆ.

ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಕೂಡಾ ಪರಿಷ್ಕರಿಸಲಾಗಿದೆ. ಇನ್ನು ಒಂದೇ ವಿಷಯಕ್ಕೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು 427 ರೂ. ಬದಲಾಗಿ 448 ರೂ. ಪಾವತಿಸಬೇಕಾಗುತ್ತದೆ. ಎರಡು ವಿಷಯಗಳಿಗೆ ಪರೀಕ್ಷೆ ಬರೆಯುವವರು 532 ರೂ. ಬದಲಾಗಿ 559 ರೂ. ಪಾವತಿಸಬೇಕಾಗುತ್ತದೆ. ಮೂರು ಮತ್ತು ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕ 716 ರೂ. ಹೆಚ್ಚಿಸಿ 752 ರೂ. ಏರಿಕೆ ಮಾಡಲಾಗಿದೆ.

ಪೋಷಕರ ವಿರೋಧ
2025-26ನೇ ಸಾಲಿನ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದ್ದು, ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮಾಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ ಮತ್ತು ಇತರ ಸಂಬಂಧಿತ ಆಡಳಿತಾತಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದರೆ ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಪರೀಕ್ಷಾ ಶುಲ್ಕ
ಪ್ರಥಮ ಬಾರಿ – 676 ರೂ. ನಿಂದ 710 ರೂ.
ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236ರಿಂದ 248 ರೂ.
ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69ರಿಂದ ನಿಂದ 72 ರೂ.
ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ
ಒಂದು ವಿಷಯ- 427 ರೂ.ನಿಂದ 448 ರೂ.
ಎರಡು ವಿಷಯ -532 ರೂ.ನಿಂದ 559 ರೂ.
ಮೂರು ಮತ್ತು ಮೂರಕ್ಕಿಂತ ಹೆಚ್ಚಿದ್ದರೆ, 716 ರೂ.ನಿಂದ 752 ರೂಗಳು.

RELATED ARTICLES

Latest News