ಬೆಂಗಳೂರು, ಮೇ2- ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ ಶೇ.62.34ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿಯಲ್ಲಿಂದು ಫಲಿತಾಂಶ ಪ್ರಕಟಿಸಿದರು. 2024-25ನೇ ಸಾಲಿನ ಪರೀಕ್ಷೆಗೆ ಶಾಲಾ ವಿದ್ಯಾರ್ಥಿಗಳು(ಫ್ರೆಶರ್) 7.90 ಲಕ್ಷ ಮಂದಿ ಹಾಜರಾಗಿದ್ದರು. ಅವರಲ್ಲಿ 5.23 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.66.14ರಷ್ಟು ಫಲಿತಾಂಶ ಬಂದಿದೆ.
ಖಾಸಗಿ ಅಭ್ಯರ್ಥಿಗಳಲ್ಲಿ ಶೇ.8.15. ಪುನಾವರ್ತಿತ ಶಾಲಾ ಅಭ್ಯರ್ಥಿಗಳಲ್ಲಿ ಶೇ. 1.85 ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಶೇ.5ರಷ್ಟು, ಒಟ್ಟಾರೆ 8,42,173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5.24,984 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.62.34ರಷ್ಟು ಫಲಿತಾಂಶ ಬಂದಿದೆ.
ಎಂದಿನಂತೆ ಈ ಬಾರಿಯೂ ಹೆಣ್ಣು ಮಕ್ಕಳು ಹಾಗೂ ನಗರದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಾಲ್ಕು ಲಕ್ಷ 5 79 ಹೆಣ್ಣುಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2,96,438 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.74ರಷ್ಟು ಫಲಿತಾಂಶ ಬಂದಿದೆ. 3,90,311 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು, 2,26,637 ಮಂದಿ ಪಾಸಾಗಿ ಶೇ.58.07ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರದ ಪ್ರದೇಶದಲ್ಲಿ 3,35,446 ವಿದ್ಯಾರ್ಥಿಗಳು ಪರೀಕ್ಷೆ ಬರೆದು 2,24,900 ಮಂದಿ ಪಾಸಾಗಿ ಶೇ.67.05 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ 4,55,444 ಮಂದಿ ಪರೀಕ್ಷೆಗೆ ಹಾಜರಾಗಿ ಮಂದಿ ಉತ್ತೀರ್ಣರಾಗಿದ್ದಾರೆ. ಶೇ.65.47ರಷ್ಟು ಫಲಿತಾಂಶ ಬಂದಿದೆ.
2,98,175 ಅನುದಾನ ರಹಿತ ಶಾಲಾ ಕಾಲೇಜುಗಳ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಶೇ.62.07, ಅನುದಾನಿತ ಶಾಲೆಗಳಲ್ಲಿ ಶೇ.58.97, ಅನುದಾನ ರಹಿತ ಶಾಲೆಗಳಲ್ಲಿ ಶೇ.75.59ರಷ್ಟು ಫಲಿತಾಂಶ ಬಂದಿದೆ. ಆರು ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದ್ದು, ಅನುದಾನಿತ 30, ಅನುದಾನ ರಹಿತ 108 ಶಾಲೆಗಳನ್ನು ಒಳಗೊಂಡಂತೆ 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದೆ.
ಸಾಮಾಜಿಕ ಗುಂಪುವಾರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.78.78ರಷ್ಟು, 3ಎ ವಿದ್ಯಾರ್ಥಿಗಳು ಶೇ.78.97, 3ಬಿ ವಿದ್ಯಾರ್ಥಿಗಳು ಶೇ.73.39. ಪ್ರವರ್ಗ 1ರಲ್ಲಿ ಶೇ.63.1ರಷ್ಟು, 2ಎನಲ್ಲಿ ಶೇ.70.86. ಎಸ್ಸಿಗಳಲ್ಲಿ ಶೇ.59.11, ಎಸ್ಟಿ ಶೇ.58.4ರಷ್ಟು, 2ಬಿನಲ್ಲಿ ಶೇ.57.27ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಆಂಗ್ಲಭಾಷಾ ಮಾಧ್ಯಮದ ವಿದ್ಯಾರ್ಥಿಗಳು ಶೇ.78.38ರಷ್ಟು ಪಾಸಾಗಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ಮಾಧ್ಯಮದ ಶೇ.57.61ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಶೇ.90ರಿಂದ 100ರಷ್ಟು ಅಂಕ ಪಡೆದು 55,066 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ. ಇದರ ಶೇಕಡವಾರು ಪ್ರಮಾಣ ಶೇ.10.53ರಷ್ಟಿದೆ. ಶೇ.80ರಿಂದ 89ರಷ್ಟು ಅಂಕಗಳನ್ನು 96,536 ವಿದ್ಯಾರ್ಥಿಗಳು ಪಡೆದಿದ್ದಾರೆ.
ಶೇ.70ರಿಂದ 79ರಷ್ಟು ಅಂಕಗಳನ್ನು 1,14,852 ವಿದ್ಯಾರ್ಥಿಗಳು, ಶೇ.60ರಿಂದ 69ರಷ್ಟು ಅಂಕಗಳನ್ನು 1.26.541 ವಿದ್ಯಾರ್ಥಿಗಳು, ಶೇ.50ರಿಂದ 59ರಷ್ಟು ಅಂಕಗಳನ್ನು 1,09,762 ವಿದ್ಯಾರ್ಥಿಗಳು, ಶೇ.35ರಿಂದ 49ರಷ್ಟು ಅಂಕಗಳನ್ನು 20.318 ವಿದ್ಯಾರ್ಥಿಗಳು ಪಡೆದಿದ್ದಾರೆ. 625ಕ್ಕೆ 625 ಪೂರ್ಣ ಅಂಕಗಳನ್ನು ಈ ಬಾರಿ 22 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.
ತಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ತಿಳಿಸಿದರು.
ಕಳೆದ ವರ್ಷದ ಶೇ.53ರಷ್ಟಿರಿಂದ ಈ ವರ್ಷ ಶೇ.8ರಷ್ಟು ಸುಧಾರಣೆ ಕಂಡಿದೆ. ಶೇಕಡವಾರು 60ಕ್ಕಿಂತ ಹೆಚ್ಚು ಅಂಕ ಪಡೆದವರು ಕಳೆದ ವರ್ಷ ಶೇ.62ರಷ್ಟಿದ್ದರೂ, ಈ ಬಾರಿ ಶೇ.75ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 625 ಪೂರ್ಣ ಅಂಕ ಪಡೆದವರು ಇಬ್ಬರು ಮಾತ್ರ ಇದ್ದರೂ. ಈ ಬಾರಿ 22 ಮಕ್ಕಳು ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಫಲಿತಾಂಶ ಶೇ.53ರಷಾಗಿತ್ತು. ಸರ್ಕಾರ ಗ್ರೆಸ್ ಮಾರ್ಕ್ ಕೊಟ್ಟಿದ್ದರಿಂದ ಒಟ್ಟು ಫಲಿತಾಂಶ ಶೇ.73ರಷ್ಟಕ್ಕೆ ಹೆಚ್ಚಾಗಿತ್ತು. ಕಲಿಕೆಯಲ್ಲಿ ಹಿಂದುಳಿದವರಿಗೆ ಗ್ರೇಸ್ ಮಾರ್ಕ್ ಅನಿವಾರ್ಯವಾಗಿತ್ತು. ಜೊತೆಗೆ ಪರೀಕ್ಷೆ-2 ಮತ್ತು 3 ಹಂತಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು ಎಂದರು.
ಆನಂತರ ಸಿಎಂ ಅವರ ಸೂಚನೆ ಮೇರೆಗೆ ಬಹಳಷ್ಟು ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಶಾಲಾ ಕೊಠಡಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿ ವಿಶೇಷ ತರಗತಿ ಆಯೋಜಿಸಲಾಗಿದೆ. 13 ಸಾವಿರ ಅಥಿತಿ ಶಿಕ್ಷಕರ ನೇಮಿಸಲಾಗಿದೆ, ಈ ಎಲ್ಲಾ ಕ್ರಮಗಳಿಂದ ಫಲಿತಾಂಶ ಸುಧಾರಣೆಯಾಗಿದೆ ಎಂದು ಹೇಳಿದರು. 1 ರಿಂದ 9ನೆ ತರಗತಿಯವರೆಗೂ ವಿದ್ಯಾರ್ಥಿಗಳು ಸಾಮರ್ಥ್ಯ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿಲ್ಲ, ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಆತಂರಿಕ ಮೌಲ್ಯ ಮಾಪನ ನಡೆಸಲಾಗಿದೆ ಎಂದರು.
ಜಿಲ್ಲಾವಾರು ಫಲಿತಾಂಶ :
- ದಕ್ಷಿಣ ಕನ್ನಡ-91.12
- ಉಡುಪಿ-89.96
- ಉತ್ತರಕನ್ನಡ-83.19
- ಶಿವಮೊಗ್ಗ-82.29
- ಕೊಡಗು-82.21
- ಹಾಸನ-82.12
- ಶಿರಸಿ-80.47
- ಚಿಕ್ಕಮಗಳೂರು-77.90
- ಬೆಂ.ಗ್ರಾಮಾಂತರ-74.02
- ಬೆಂ.ದಕ್ಷಿಣ-72.30
- ಬೆಂ.ಉತ್ತರ-72.27
- ಮಂಡ್ಯ-69.27
- ಹಾವೇರಿ-69.03
- ಕೋಲಾರ-68.47
- ಮೈಸೂರು-68.39
- ಬಾಗಲಕೋಟೆ-68.29
- ಗದಗ-67.72
- ಧಾರವಾಡ-67.62
- ವಿಜಯನಗರ-67.62
- ತುಮಕೂರು-67.03
- ದಾವಣಗೆರೆ-66.09
- ಚಿಕ್ಕಬಳ್ಳಾಪುರ-63.64
- ಚಿತ್ರದುರ್ಗ-63.21
- ರಾಮನಗರ-63.12
- ಬೆಳಗಾವಿ-62.16
- ಚಿಕ್ಕೋಡಿ-62.12
- ಚಾಮರಾಜನಗರ-61.45
- ಮಧುಗಿರಿ-60.65
- ಬಳ್ಳಾರಿ-60.26
- ಕೊಪ್ಪಳ-57.32
- ಬೀದರ್-53.25
- ರಾಯಚೂರು-52.05
- ಯಾದಗಿರಿ-51.60
- ವಿಜಯಪುರ-59.58
- ಕಲಬುರಗಿ 42.43 (ಒಟ್ಟು ಫಲಿತಾಂಶ 66.14)









