ಬೆಂಗಳೂರು,ಮಾ.25- ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ. ದಾರವಾಡದ ಪ್ರಶಾಂತ್ ಗುಂಡುಮಿ(41), ಬನಶಂಕರಿ ಮೂರನೇ ಹಂತ ಶ್ರೀನಿವಾಸ್ ನಗರದ ಮೊನಿಷ್(26) ಮತ್ತು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಸಿಟಿ ರಾಜಶೇಖರ್ ಎಚ್. ಬಳ್ಳಾರಿ(41) ಬಂಧಿತ ಆರೋಪಿಗಳು.
ಹೆಚ್ಚಿನ ಹಣ ಸಂಪಾದನೆ ಮಾಡುವ ದುರುದ್ದೇಶ ದಿಂದ ದೂರಶಿಕ್ಷಣದ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ನಮ ಅಕಾಡೆಮಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಎಂದು ನಂಬಿಸಿ, ಒಬ್ಬೊಬ್ಬರಿಂದಲೂ 5 ರಿಂದ 10 ಸಾವಿರ ರೂ. ಪಡೆದು, ಸುಮಾರು 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ವಿತರಣೆ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಬನಶಂಕರಿಯಲ್ಲಿ ಅಕಾಡೆಮಿ ನಡೆಸುತ್ತಿದ್ದ ಮಾಲೀಕ ಹಾಗೂ ದಾರವಾಡ ಇಬ್ಬರು ವಂಚಕರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಈ ನಕಲಿ ಅಂಕಪಟ್ಟಿಯನ್ನು ಸಾರಿಗೆ ಇಲಾಖೆ ಹಾಗೂ ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ನೀಡಿ ಕೆಲವರು ಉದ್ಯೋಗ ಪಡೆದುಕೊಂಡಿದ್ದಾರೆಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಘಟನೆ ವಿವರ: ಕತ್ರಿಗುಪ್ಪೆ ಮುಖ್ಯರಸ್ತೆಯ ರಾಮ್‌ರಾವ್ ಲೇಔಟ್‌ನಲ್ಲಿರುವ ಅಕಾಡೆಮಿಯೊಂದರ ಮಾಲೀಕರನ್ನು ಭೇಟಿ ಮಾಡಿ, ವ್ಯಕ್ತಿಯೊಬ್ಬರು ತಮ ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಿಸಿದ್ದಾರೆ.
ದಾಖಲಾದ ಕೆಲವೇ ದಿನಗಳಲ್ಲಿ ಈತನಿಗೆ ಯಾವುದೇ ಪರೀಕ್ಷೆಯನ್ನು ಬರೆಸದೆ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಯನ್ನು ನೀಡಿದ್ದು, ಅಂಕಪಟ್ಟಿಯನ್ನು ಅವರು ಪರಿಶೀಲನೆ ಮಾಡಿದಾಗ ನಕಲಿ ಅಂಕಪಟ್ಟಿ ಎಂದು ಗೊತ್ತಾಗಿದೆ.
ತಕ್ಷಣ ಅವರು ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬನಶಂಕರಿಯಲ್ಲಿರುವ ಅಕಾಡೆಮಿ ಮೇಲೆ ದಾಳಿ ನಡೆಸಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಾರವಾಡ ಹಾಗೂ ಬೆಳಗಾವಿಯ ವ್ಯಕ್ತಿ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಸ್ಥೆಯ ಹೆಸರಿನಲ್ಲಿ ಹಣ ಪಡೆದು, ಅಕಾಡೆಮಿ ವತಿಯಿಂದ ಕಳಿಸುವ ದಾಖಲಾತಿಗಳ ಆಧಾರದ ಮೇಲೆ 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳನ್ನು ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಅಲ್ಲದೇ ಸುಮಾರು 25 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಅಂಕಪಟ್ಟಿಗಳನ್ನು ಕೊಡಿಸಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಕಛೇರಿಯಲ್ಲಿದ್ದ ಶಿಕ್ಷಣ ಮಂಡಳಿಗೆ ಸೇರಿದ 1 ಅಸಲಿ ಪಿಯುಸಿ ಅಂಕಪಟ್ಟಿ, ಅಸಲಿ ಲೀವಿಂಗ್ ಸರ್ಟಿಪಿಕೇಟ್, ಅಸಲು ಪ್ರಾವಿಷನಲ್ ಮಾರ್ಕ್ಸ್ ಕಾರ್ಡ್, ಅಸಲಿ ಹಾಲ್ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಧಾರವಾಡದ ಆರೋಪಿಯನ್ನು ಮೊಬೈಲ್ ಫೋನ್ ಸಮೇತ ಶ್ರೀನಗರದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.ಅಲ್ಲದೇ ಆತನ ಮೊಬೈಲ್ ಪರಿಶೀಲಿಸಿದಾಗ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿಯ ಹೆಸರಿನಲ್ಲಿ ಸುಮಾರು 300 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಕಂಡು ಬಂದಿದೆ.
ಈ ಆರೋಪಿಯನ್ನು ಹೆಚ್ಚಿನ ವಿಚಾಣೆಗೊಳಪಡಿಸಿ, ಶ್ರೀನಗರದಲ್ಲಿರುವ ಕಚೇರಿಯನ್ನು ಪರಿಶೀಲಿಸಿದಾಗ, ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದ ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗೆ ಪಡೆದುಕೊಂಡು, ವಿವಿಧ ಇಲಾಖೆಗಳಿಂದ (ಸಾರಿಗೆ ಇಲಾಖೆ, ಪಾಸ್‌ಪೋರ್ಟ್ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ) ಅಕಾಡೆಮಿಗೆ ವರದಿ ಕೇಳಿರುವ ಮತ್ತು ಅಕಾಡೆಮಿಯು ನೀಡಿರುವ ಅಂಕಪಟ್ಟಿಗಳ ನೈಜತೆಯ ಬಗ್ಗೆ ವರದಿ ನೀಡಿರುವ ಸುಮಾರು 50 ಕ್ಕೂ ಹೆಚ್ಚು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಈತನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ಬ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೂ ಸಹ ಈ ಆರೋಪಿಗಳೊಂದಿಗೆ ಸೇರಿಕೊಂಡು, ಕಮೀಷನ್ ಆಸೆಗಾಗಿ ಮಧ್ಯವರ್ತಿಗಳಿಂದ ಹೆಚ್ಚಿನ ಹಣ ಪಡೆದು ಅಂಕಪಟ್ಟಿಗಳನ್ನು ಕೊಡಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಆತನ ವಶದಲ್ಲಿದ್ದ ಮೊಬೈಲ್ ಫೋನ್‌ನನ್ನು ಪರಿಶೀಲಿಸಿದಾಗ 50 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಕಂಡು ಬಂದಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬೆಳಗಾವಿ ಮೂಲದ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರಿದಿದೆ.