ಬೆಂಗಳೂರು,ಡಿ.28- ಬಿಜೆಪಿಯ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಕುರಿತು ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿಯಲ್ಲಿ ಬಂಡಾಯಗಾರರೆಂದೇ ಇತ್ತೀಚೆಗೆ ಗುರುತಿಸಿಕೊಂಡಿರುವ ಈ ಇಬ್ಬರು ಮಾಜಿ ಸಚಿವರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಬಿಜೆಪಿಯ ಚಟುವಟಿಕೆಗಳಿಂದ ಇಬ್ಬರೂ ದೂರ ಉಳಿದಿದ್ದಾರೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕಾಂಗ ಸಭೆಯ ಸದಸ್ಯರಿಗಾಗಿ ಆಯೋಜಿಸಿದ್ದ ಭೋಜನಾ ಕೂಟದಲ್ಲೂ ಈ ಇಬ್ಬರೂ ಶಾಸಕರು ಕಾಣಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಗೃಹಸಚಿವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಸಂಚಾರ ದಟ್ಟಣೆ ಹೆಚ್ಚಿರುವ ಮಾಗಡಿ ರಸ್ತೆಗೆ ಪ್ರತ್ಯೇಕ ಪೊಲೀಸ್ ಠಾಣೆ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯನ್ನು ವಿಭಜಿಸಿ ಹೊಸದಾಗಿ ಅಂದ್ರಳ್ಳಿ ಪೆಪೊಲೀಸ್ ಠಾಣೆ ಮಾಡುವಂತೆ ಸಚಿವರ ಗಮನಕ್ಕೆ ತಂದಿದ್ದೇವೆ ಎಂದರು.
ದೆಹಲಿ ಸರ್ಕಾರದ ಟ್ಯಾಬ್ಲೊ ಪ್ರದರ್ಶನಕ್ಕೆ ಬಿಜೆಪಿ ಕೊಕ್ಕೆ
ಬಂಡಾಯಗಾರರು ಪಕ್ಷ ವಿರೋಧಿ ಚಟವಟಿಕೆಗಳನ್ನು ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾಲ ಬಂದಿದೆ ಎಂದು ಬಿಜೆಪಿ ಸಂಸದ ಸದಾನಂದಗೌಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್.ಟಿ.ಸೋಮಶೇಖರ್, ಅವರು ಸರಿಯಾಗಿಯೇ ಹೇಳಿದ್ದಾರೆ. ನಾವೇನು ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬುದು ಸರಿಯಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಆರ್.ಅಶೋಕ್ ಅವರು ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿದ್ದಾರೆ. ಇತ್ತೀಚೆಗೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಇದು ರಾಷ್ಟ್ರೀಯ ಪಕ್ಷ, ಕಾಲಕ್ಕನುಗುಣವಾಗಿ ಎಲ್ಲವೂ ನಡೆಯುತ್ತವೆ ಎಂದರು.
ಬಿಜೆಪಿಯಲ್ಲಿ ನಾವು ಆರಾಮಾಗಿದ್ದೇವೆ ಎಂದ ಸೋಮಶೇಖರ್, ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಹಗರಣ ಆಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ ವೇಳೆ ತಾವು ಊರಿನಲ್ಲಿ ಇರಲಿಲ್ಲ ಎಂದು ಜಾರಿಕೊಂಡರು. ಶಿವರಾಂ ಹೆಬ್ಬಾರ್‍ರವರು ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯಿಂದ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿದ್ದಾಗಿ ಹೇಳಿದರು.