Thursday, March 6, 2025
Homeರಾಜ್ಯನಾಳೆ ಬಹುನಿರೀಕ್ಷಿತ ರಾಜ್ಯ ಬಜೆಟ್, ಹೇಗಿರಲಿದೆ ಸಿದ್ದರಾಮಯ್ಯನವರ ಲೆಕ್ಕಾಚಾರ..?

ನಾಳೆ ಬಹುನಿರೀಕ್ಷಿತ ರಾಜ್ಯ ಬಜೆಟ್, ಹೇಗಿರಲಿದೆ ಸಿದ್ದರಾಮಯ್ಯನವರ ಲೆಕ್ಕಾಚಾರ..?

state budget tomorrow, what will Siddaramaiah's calculations be..?

ಬೆಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ತಮ್ಮ ದಾಖಲೆಯ ಬಜೆಟ್‌ ಮಂಡನೆ ಮಾಡುತ್ತಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್‌‍ ಪ್ರಣಾಳಿಕೆಯ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದು ಸೇರಿದಂತೆ ಮತ್ತಷ್ಟು ಜನಪರ ಯೋಜನೆಗಳನ್ನು ಸೇರ್ಪಡೆ ಮಾಡಲಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇದೆ ಎಂಬ ಕಾರಣಕ್ಕೆ ಹಲವಾರು ಮಂದಿ ಶಾಸಕರು ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಈ ನಿಟ್ಟಿನಲ್ಲಿ ಬಹಳಷ್ಟು
ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಅದಕ್ಕೆ ತೆರೆ ಎಳೆಯಲು ಸಿದ್ದರಾಮಯ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿದ್ದಾರೆ.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಕಟ್ಟಡಗಳ ನಿರ್ಮಾಣ, ತರಗತಿ ಕೊಠಡಿಗಳ ಸಂಖ್ಯೆ ಹೆಚ್ಚಳ, ಶಿಕ್ಷಕರ ನೇಮಕಾತಿ, ಆರೋಗ್ಯ ವಲಯದಲ್ಲಿ ಪ್ರಾಥಮಿಕ ಸೇವೆಯ ಬಲವರ್ಧನೆ, ಜಿಲ್ಲಾ ಕೇಂದ್ರಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಲಭ್ಯ ಹೆಚ್ಚಳ, ಕೈಗಾರಿಕೆಗಳಿಗೆ ಹಲವಾರು ವಿಶೇಷ ವಲಯಗಳ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ.

ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆಯೂ ಪ್ರಸ್ತಾಪಿಸಲಿರುವ ಸಿದ್ದರಾಮಯ್ಯ, ನ್ಯಾಯಯುತ ತೆರಿಗೆ ಪಾಲಿಗಾಗಿ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡಲಿದ್ದಾರೆ. ನೀರಾವರಿ ಯೋಜನೆಗಳ ಪೈಕಿ ಅದರಲ್ಲೂ ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳ ಪ್ರಸ್ತಾಪ ಮಾಡಿ, ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆಯಲಿದ್ದಾರೆ.

ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಬಳಿ ಅಣೆಕಟ್ಟು ನಿರ್ಮಾಣ ಮಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರು ಪೂರೈಸಲು ಹಲವು ವರ್ಷಗಳಿಂದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ಗೋವಾ ರಾಜ್ಯದ ಆಕ್ಷೇಪಕ್ಕೆ ಮಣೆ ಹಾಕಿ, ಪರಿಸರ ರಕ್ಷಣೆ ನೆಪದಲ್ಲಿ ನಿರಾಕ್ಷೇಪಾಣಾ ಪತ್ರ ನೀಡದೆ ವಿಳಂಬ ಮಾಡುತ್ತಿದೆ ಎಂಬ ಆರೋಪಗಳಿವೆ.

ಅದಕ್ಕಾಗಿ ಬಜೆಟ್‌ ನಲ್ಲಿ ಹಿಂದಿನ ಸರ್ಕಾರಗಳು ಕೂಡ ಕಳಸಾ ಬಂಡೂರಿ ಯೋಜನೆಯನ್ನು ಪ್ರಸ್ತಾಪಿಸಿದ್ದರೂ. ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ಹೆಜ್ಜೆ ಇಡಲು ಮುಂದಾಗಿದೆ.ಹಳೆ ಮೈಸೂರು ಭಾಗದಲ್ಲಿ ಮೇಕೆದಾಟು ಯೋಜನೆ ಬಹುನಿರೀಕ್ಷೆ ಮೂಡಿಸಿದೆ.

ಕಾಂಗ್ರೆಸ್‌‍ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ಪಾದಯಾತ್ರೆ ನಡೆಸಿ, ಯೋಜನೆ ಜಾರಿಗೆ ಆಗಿನ ಸರ್ಕಾರದ ಮೇಲೆ ಒತ್ತಡ ಹಾಕಿತ್ತು. ಅಧಿಕಾರಕ್ಕೆ ಬಂದ ಬಳಿಕ ತಮಿಳುನಾಡಿನ ಆಕ್ಷೇಪವನ್ನು ನೆಪ ಮಾಡಿಕೊಂಡು ಕಾಲಹರಣ ಮಾಡಲಾಗುತ್ತಿದೆ ಎಂಬ ಟೀಕೆಗಳಿವೆ. ಬಜೆಟ್‌ ನಲ್ಲಿ ಯೋಜನೆಗೆ ಚಾಲನೆ ನೀಡುವ ಕುರಿತಂತೆ ಸಿದ್ದರಾಮಯ್ಯ ಮಹತ್ವದ ಪ್ರಕಟಣೆ ಹೊರಡಿಸಲಿದ್ದಾರೆ ಎನ್ನಲಾಗಿದೆ. ಜೊತೆಗೆ ಬಾಕಿ ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸುವ ಕುರಿತು ಹಾಗೂ ಹೊಸದಾಗಿ ಹಲವಾರು ಏತ ನೀರಾವರಿ ಯೋಜನೆಗಳನ್ನು ಆರಂಭಿಸುವ ಪ್ರಕಟಣೆಗಳನ್ನು ಬಜೆಟ್‌ ಒಳಗೊಳ್ಳಲಿದೆ.

ಹೈನುಗಾರಿಕೆ, ಕೃಷಿ, ಪಶುಸಂಗೋಪನೆಯಲ್ಲಿ ಬೇಸಾಯಕ್ಕೆ ಪೂರಕವಾದ ಕೆಲವು ಯೋಜನೆಗಳ ಪ್ರಸ್ತಾವನೆ ಇದೆ. ಪಂಚಖಾತ್ರಿಗಳ ಪೈಕಿ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿವೆ. ಹೆಚ್ಚುವರಿಯಾಗಿ ಮಹಿಳಾ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳನ್ನು ಆರ್ಥಿಕ ಚಟುವಟಿಕೆಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಯುವನಿಧಿಗೆ ಮತ್ತಷ್ಟು ಪದವೀಧರರ ಸೇರ್ಪಡೆ, ಗೃಹಜ್ಯೋತಿ ಯೋಜನೆಗೆ ಪೂರ್ಣ ಪ್ರಮಾಣದ ಹಣ ಒದಗಿಸುವುದು ಸೇರಿದಂತೆ ಅನೇಕ ನಿರ್ಧಾರಗಳನ್ನು ಸಿದ್ದರಾಮಯ್ಯ ಪ್ರಕಟಿಸಲಿದ್ದಾರೆ. ಇಂಧನ ಇಲಾಖೆಯಲ್ಲಿ ಕೃಷಿ ಪಂಪ್‌ ಸೆಟ್‌ಗಳನ್ನು ಸೌರಶಕ್ತಿಗೆ ಜೋಡಣೆ ಮಾಡುವುದು, ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಮತ್ತಷ್ಟು ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎನ್ನಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆಗಳು ಹಾಗೂ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವ ನಿರೀಕ್ಷೆ ಇರುವುದರಿಂದ ಸಿದ್ದರಾಮಯ್ಯ ಜನಪ್ರಿಯ ಬಜೆಟ್‌ ಮಂಡನೆ ಮಾಡಲು ಮುಂದಾಗಿದ್ದಾರೆ.

RELATED ARTICLES

Latest News