ಮೈಸೂರು,ಫೆ.19- ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದು ಒಳ್ಳೆಯ ನಿರ್ಧಾರ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೊಂದು ವಿ.ವಿ ಕೊಟ್ಟರೇ ಏನಾಗಬೇಕು. ಗ್ಯಾಂಟೇ ಕೊಟ್ಟಿಲ್ಲ. ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ಫಿಕ್ಸ್ ಮಾಡಿದ್ದೇ ಈ ಹಿಂದಿನ ಬಿಜೆಪಿ ಸರ್ಕಾರ. ಅದು ಈಗಲೂ ಮುಂದುವರಿದಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಹಲವು ವಿವಿಗಳನ್ನು ಬಂದ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಸರಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿಗೆ ಅಕ್ಷರ, ಆರೋಗ್ಯ ಎರಡಕ್ಕೂ ಬೆಲೆ ಇಲ್ಲದಂತಾಗಿದೆ ಎಂದವರು ವಿಷಾದ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಶಾಂತಿಗೆ ಅವಕಾಶ ಇಲ್ಲದಂತಾಗಿದೆ. ಎಲ್ಲಾ ಕಡೆ ಪ್ರಕ್ಷುಬ್ಧತೆ, ಗಲಾಟೆ ಗಲಭೆ, ಕೊಲೆ, ಆತ್ಮಹತ್ಯೆಗಳು ನಡೆಯುತ್ತಿವೆ. ಇದಕ್ಕೆಲ್ಲಾ ಯಾರು ಕಾರಣ? ಜನ ಕಾರಣ ಅಲ್ಲ, ನಾವು ಆಯ್ಕೆ ಮಾಡಿದ ಸರ್ಕಾರ ಕಾರಣ. ಸರ್ಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಸ್ತುತ ರಾಜ್ಯದ ವಿದ್ಯಮಾನಗಳ ಕುರಿತು ಅವರು ಬೇಸರ ವ್ಯಕ್ತಪಡಿಸಿದರು. ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕಾಂಗಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬಜೆಟ್ ಕುರಿತು ಶಾಸಕಾಂಗ ಒಪ್ಪಿಗೆ ನೀಡುತ್ತದೆ. ಆದರೆ ಸರ್ಕಾರ ಶಾಸಕಾಂಗ ಒಪ್ಪಿಗೆ ನೀಡಿದ ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಏನು ಮಾಡಿದೆ?. ಕಳೆದ ಬಾರಿಯ ಬಜೆಟ್ ಏನಾಯಿತು? ಎಂದು ಪ್ರಶ್ನಿಸಿದರು.
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಉತ್ತರಪ್ರದೇಶ ಸರ್ಕಾರ ಮಾಡಿರುವ ವ್ಯವಸ್ಥೆ ಅತ್ಯುತ್ತಮವಾಗಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ ಇಡೀ ಕುಂಭಮೇಳದ ವ್ಯವಸ್ಥೆ ಚೆನ್ನಾಗಿದೆ. ಒಂದು ಮನೆ ನಡೆಸುವುದೇ ಕಷ್ಟ, ಕೋಟ್ಯಾಂತರ ಜನರು ಭಾಗಿಯಾಗಿರುವ ಕುಂಭಮೇಳ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಉತ್ತರಪ್ರದೇಶ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ಶ್ಲಾಘಿಸುವ ಮೂಲಕ ಉತ್ತರಪ್ರದೇಶ ಸರ್ಕಾರಕ್ಕೆ ಶಹಭಾಷ್ ಗಿರಿ ನೀಡಿದರು.
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗದ ವಿಚಾರ ಕುರಿತು ಗೃಹ ಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಮನೆಗಳು ಮುರಿದು ಹೋಗುವ ಪರಿಸ್ಥಿತಿ ಬಂದಿದೆ ಎಂದರು.