ಬೆಳಗಾವಿ,ಡಿ.13- ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ ಒಟ್ಟು 52,416.17 ಕೋಟಿ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಗೃಹಲಕ್ಷಿ ಯೋಜನೆಗೆ ಇದುವರೆಗೆ 1,28,59,073 ಕುಟುಂಬದ ಯಜಮಾನಿಯರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 1,24,12,543 ಫಲಾನುಭವಿಗಳಿಗೆ ಒಟ್ಟು 52,416.17 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದರು.
ಅಂದರೆ ಇಲ್ಲಿ ಪ್ರತಿ ಫಲಾನುಭವಿಗಳಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಈವರೆಗೆ 22 ಕಂತುಗಳಲ್ಲಿ ಒಟ್ಟು 44,000 ರೂ.ಗಳನ್ನು ಪಾವತಿ ಮಾಡಲಾಗಿದೆ. ಈವರೆಗೆ 52,416.17 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷಿ ಯೋಜನೆಗೆ ನೋಂದಾಯಿಸಿದ ಫಲಾನುಭವಿಗಳ ಪೈಕಿ 1,44,056 ಮಂದಿ ಮರಣ ಹೊಂದಿದ್ದಾರೆ ಎಂಬ ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.
ಗೃಹಲಕ್ಷಿ ಯೋಜನೆಗೆ ದಾಖಲೆ ಸಂಖ್ಯೆಯಲ್ಲಿ ಮಹಿಳೆಯರು ನೋಂದಾಯಿಸಿಕೊಂಡಿರುವುದು ಸರ್ಕಾರದ ಜನಪರ ಬದ್ಧತೆಯನ್ನು ತೋರಿಸುತ್ತದೆ. ಸಣ್ಣ ಅವಧಿಯಲ್ಲಿಯೇ 1.24 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹಣ ಸಂದಾಯ ಮಾಡಿರುವುದು ಪ್ರಶಂಸನೀಯ.
ಈ ಯೋಜನೆಯಿಂದ ರಾಜ್ಯದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳಲು ದೊಡ್ಡ ಮಟ್ಟದ ಕೊಡುಗೆ ಸಿಕ್ಕಿದೆ. ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆಯಾಗುತ್ತಿರುವುದು ಯೋಜನೆಗೆ ಪಾರದರ್ಶಕತೆಯನ್ನು ತಂದಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.
