ಬೆಂಗಳೂರು, ಜ.1- ಕಳೆದ 2025ನೇ ವರ್ಷದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.14 ರಷ್ಟು ಹೆಚ್ಚು ಮಳೆಯಾಗಿದೆ. ಜನವರಿ ಒಂದರಿಂದ ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 1153 ಮಿ.ಮೀ.ಆಗಿದ್ದು, ಕಳೆದ ಒಂದು ವರ್ಷದಲ್ಲಿ 1319 ಮಿ.ಮೀ.ನಷ್ಟು ಮಳೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿದ್ದು, ಪ್ರಮುಖ ಜಲಾಶಯಗಳ ನೀರಿನ ಕೊರತೆಯನ್ನು ನೀಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯ 14 ಪ್ರಮುಖ ಜಲಾಶಗಳಲ್ಲಿ ಪ್ರಸ್ತುತ ಶೇ.70ರಷ್ಟು ನೀರಿನ ಸಂಗ್ರಹವಿದೆ. ಎಲ್ಲಾ ಜಲಾಶಯಗಳಿಂದ ಒಟ್ಟು 895.07 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿದ್ದು, 649.05 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 731.34 ಟಿಎಂಸಿ ಅಡಿಯಷ್ಟು ನೀರಿತ್ತು.
ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾದ ಪರಿಣಾಮದಿಂದ ಕಳೆದ ವರ್ಷಕ್ಕಿಂತಲೂ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಕಡಿಮೆಯಾಗಿದೆ. ಆದರೂ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ವಿರಳ.
2025ರ ಜನವರಿ ಒಂದರಿಂದ ಡಿಸೆಂಬರ್ ಅಂತ್ಯದವರೆಗಿನ ಒಂದು ವರ್ಷದ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ.4, ಉತ್ತರ ಒಳನಾಡಿನಲ್ಲಿ ಶೇ. 21, ಮಲೆನಾಡು ಭಾಗದಲ್ಲಿ ಶೇ.9 ಹಾಗೂ ಕರಾವಳಿ ಭಾಗದಲ್ಲಿ ಶೇ. 19ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಒಟ್ಟಾರೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಚಿತ್ರದುರ್ಗ-ಶೇ.5 ರಷ್ಟು, ಮೈಸೂರು-ಶೇ.45 ರಷ್ಟು,, ಚಾಮರಾಜನಗರ -ಶೇ.245 ರಷ್ಟು,,ಬಳ್ಳಾರಿ -ಶೇ.125 ರಷ್ಟು,, ವಿಜಯನಗರ-ಶೇ.85 ರಷ್ಟು,, ಹಾವೇರಿ -ಶೇ.155 ರಷ್ಟು,, ಶಿವಮೊಗ್ಗ-ಶೇ.2ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ 714 ಮಿ.ಮೀ. ವಾಡಿಕೆ ಮಳೆಗೆ 741 ಮಿ.ಮೀ., ಉತ್ತರ ಒಳನಾಡಿನಲ್ಲಿ 702 ಮಿ.ಮೀ. ವಾಡಿಕೆ ಮಳೆಗೆ 848 ಮಿ.ಮೀ., ಮಲೆನಾಡಿನಲ್ಲಿ 1950 ಮಿ.ಮೀ.ವಾಡಿಕೆ ಮಳೆಗೆ 2129 ಮಿ.ಮೀ. ಹಾಗೂ ಕರಾವಳಿಯಲ್ಲಿ 3518 ವಾಡಿಕೆ ಮಳೆಗೆ 4184 ಮಿ.ಮೀ.ನಷ್ಟು ಮಳೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾದರೆ, ಹಿಂಗಾರು ಮಳೆ ಕಡಿಮೆಯಾಗಿರುವುದು ಕಂಡುಬಂದಿದೆ. ಈ ವರ್ಷವೂ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಗಳಿದ್ದು, ಏಪ್ರಿಲ್ ವೇಳೆಗೆ ಮುಂಗಾರು ಮಳೆಯ ಮುನ್ಸೂಚನೆಯ ಮಾಹಿತಿ ದೊರೆಯಲಿದೆ.
