ಬೆಂಗಳೂರು,ಡಿ.20- ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ ಚಳಿಗಾಲದ ವಿಧಾನಸಭೆಯ ಅಧಿವೇಶನವು 10 ದಿನಗಳ ಕಾಲ 57 ಗಂಟೆ 35 ನಿಮಿಷಗಳ ಕಾಲ ನಡೆದಿದೆ. ಡಿ.8 ರಿಂದ 19 ರವರೆಗೆ ಅಧಿವೇಶನ ನಡೆದಿದ್ದು, ಒಟ್ಟು 23 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 39 ಶಾಸಕರು 17 ಗಂಟೆ 2 ನಿಮಿಷಗಳ ಕಾಲ ಪಾಲ್ಗೊಂಡು ಮಾತನಾಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಎಚ್.ವೈ.ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸಲ್ಲಿಸಿ ಮೃತರ ಗೌರವಾರ್ಥ ಸದನವನ್ನು ಮುಂದೂಡಲಾಗಿತ್ತು.
ಪ್ರಸಕ್ತ ಸಾಲಿನ ಪೂರಕ ಅಂದಾಜುಗಳ 2ನೇ ಕಂತಿಗೆ ವಿಧಾನಸಭೆ ಅನುಮೋದನೆ ನೀಡಿದ್ದು, ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ 4 ವರದಿಗಳನ್ನು ಮಂಡಿಸಲಾಗಿದೆ. ಅಲ್ಲದೆ ವಿವಿಧ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಭೆಯ ಮುಂದಿಡಲಾದ ಕಾಗದ ಪತ್ರಗಳ ಒಂದು ಮತ್ತು ಎರಡನೇ ಪಟ್ಟಿಯಿಂದ 54 ಅಧಿಸೂಚನೆಗಳು, 78 ವಾರ್ಷಿಕ ವರದಿಗಳು, 74 ಲೆಕ್ಕ ಪರಿಶೋಧನಾ ವರದಿಗಳು, 14 ಅನುಪಾಲನಾ ವರದಿಗಳು, 14 ಅನುಸರಣಾ ವರದಿಗಳನ್ನು ಮಂಡಿಸಲಾಗಿದೆ.
ಒಟ್ಟು 2109 ಪ್ರಶ್ನೆಗಳನ್ನು ಸ್ವೀಕರಿಸಿದ್ದು, 134 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ.
1750 ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಿಯಮ 351ರಡಿಯಲ್ಲಿ 180 ಸೂಚನೆಗಳನ್ನು ಅಂಗೀಕರಿಸಿದ್ದು, 70 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. 228 ಗಮನ ಸೆಳೆಯುವ ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಂಬಂಧ 7 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಸಭಾಧ್ಯಕ್ಷರು ಮಾಹಿತಿ ನೀಡಿದ್ದಾರೆ.
