ಬೆಂಗಳೂರು,ಜ.27- ಕರ್ನಾಟಕ- ಗೋವಾ ಗಡಿಯಲ್ಲಿ ನಡೆದ 400 ಕೋಟಿ ಹಣ ದರೋಡೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಮಹಾರಾಷ್ಟ್ರದ ಎಸ್‌ಐಟಿ ಪೊಲೀಸರು ಕಂಟೈನರ್‌ಗಳ ಇಬ್ಬರು ಚಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು ಚಾಲಕರ ಹೇಳಿಕೆಗಳಿಂದ ದರೋಡೆ ಹಾಗೂ ಹಣದ ಮೂಲದ ಬಗ್ಗೆ ಸತ್ಯಾಂಶ ಗೊತ್ತಾಗಲಿದೆ.
ಈಗಾಗಲೇ ಈ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಆರು ಮಂದಿಯನ್ನು ಬಂಧಿಸಿ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ್ದು, ಅವರುಗಳು ನೀಡಿದ ಮಾಹಿತಿ ಮೇರೆಗೆ ಕಂಟೈನರ್‌ಗಳ ಚಾಲಕರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಹಣ ಸಾಗಿಸಲಾಗುತ್ತಿದ್ದ ಕಂಟೈನರ್‌ಗಳು ಎಲ್ಲಿವೆ? ದರೋಡೆ ಯಾವ ಸ್ಥಳದಲ್ಲಿ ಯಾವಾಗ ನಡೆಯಿತು? ಎಷ್ಟು ಜನ ಇದ್ದರು ಎಂಬುವುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಎರಡು ಕಂಟೈನರ್‌ಗಳಲ್ಲಿ 400 ಕೋಟಿ ಹಣವನ್ನು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಆ ಹಣ ದರೋಡೆಯಾಗಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ ಎಸ್‌ಐಟಿ ಗೆ ವಹಿಸಿದೆ.
ಎರಡು ಕಂಟೈನರ್‌ಗಳಿದ್ದ ಹಣ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುವುದು ಇನ್ನೂ ನಿಗೂಢವಾಗಿದ್ದು, ಚಾಲಕರುಗಳ ವಿಚಾರಣೆಯಿಂದಷ್ಟೇ ಗೊತ್ತಾಗಲಿದೆ.ಈ ನಡುವೆ ನಾಸಿಕ್‌ಗೆ ತೆರೆಳಿದ್ದ ಖಾನಾಪುರ ಸಬ್‌ಇನ್ಸ್ ಪೆಕ್ಟರ್ ನೇತೃತ್ವದ ತಂಡಕ್ಕೆ ಮಹಾರಾಷ್ಟ್ರ ಎಸ್‌ಐಟಿ ಪೊಲೀಸರು ಈ ಪ್ರಕರಣದ ಆರೋಪಿಗಳ ವಿಚಾರಣೆಗೆ ಅನುಮತಿ ನೀಡದ ಹಿನ್ನಲೆಯಲ್ಲಿ ವಾಪಸ್ ಬರಿಗೈಯಲ್ಲಿ ಹಿಂದಿರುಗಿದೆ. ಒಟ್ಟಾರೆ ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪೊಲೀಸರು ಈ ಹಣದ ಮೂಲದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದಾರೆ.
