ಬೆಳಗಾವಿ,ಡಿ.17- ಪ್ರಶ್ನೋತ್ತರ ಸಂದರ್ಭದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಇಬ್ಬರೇ ಇಬ್ಬರು ಸದಸ್ಯರು ಆಸೀನರಾಗಿದ್ದರಿಂದ ಕೆರಳಿ ಕೆಂಡವಾದ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಸದನವನ್ನು ಕೆಲಹೊತ್ತು ಮುಂದೂಡಿದ ಪ್ರಸಂಗ ವಿಧಾನಪರಿಷತ್ನಲ್ಲಿ ಜರುಗಿತು.
ಬೆಳಗ್ಗೆ ಕಲಾಪ ಆರಂಭವಾಗುತ್ತಿ ದ್ದಂತೆ ಉಪಸಭಾ ಪತಿ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು, ಪ್ರಶ್ನೋತ್ತರ ಅವಧಿಯನ್ನು ಪ್ರಾರಂಭಿಸಲು ಮುಂದಾದರು. ಈ ವೇಳೆ ಆಡಳಿತ ಪಕ್ಷದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸದಸ್ಯರಾದ ರಾಮೋಜಿ ಗೌಡ ಹಾಗೂ ಶಿವಕುಮಾರ್ ಮಾತ್ರ ಹಾಜರಿದ್ದರು.
ಪ್ರಶ್ನೋತ್ತರ ಅವಧಿಯನ್ನು ಪ್ರಾರಂಭಿಸಲು ಮುಂದಾಗುತ್ತಿದ್ದಂತೆ ಜೆಡಿಎಸ್ನ ಭೋಜೇಗೌಡ ಅವರು ಸರ್ಕಾರಕ್ಕೆ ಸದನ ನಡೆಸುವ ಇಚ್ಛೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಭಾಪತಿಗಳು 10 ಗಂಟೆಗೆ ಸದನ ಆರಂಭವಾಗುತ್ತದೆ ಎಂದು ಹೇಳಿದ್ದರು. ಅಲ್ಲದೆ ಹಕ್ಕುಚ್ಯುತಿ ಪ್ರಕರಣ ಸಂಬಂಧ ಸಭಾಪತಿಗಳು ಸರ್ಕಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ. ಆದರೆ ಸದನದಲ್ಲಿ ಕೇವಲ ಓರ್ವ ಸಚಿವರು, ಇಬ್ಬರು ಸದಸ್ಯರು ಮಾತ್ರ ಇದ್ದಾರೆ.
ಇದು ಇಡೀ ಸದನಕ್ಕೆ ಮಾಡಿ ಅಗೌರವ. ಸಭಾಪತಿಗಳ ಪೀಠಕ್ಕೂ ಸರ್ಕಾರದಿಂದ ಅವಮಾನವಾಗಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸತೀಶ್ ಜಾರಕಿಹೊಳಿ ಒಬ್ಬರೇ ಇದ್ದಾರೆ. ಹಾಗಾಗಿ ನಮ ಜೊತೆ ಇದ್ದಾರೆ ಎಂದು ಕಾಲೆಳೆದರು.
ವಿಧಾನಪರಿಷತ್ನ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರಕಾರ ಬೇಜವಾಬ್ದಾರಿ ಸಹಿಸುವುದಿಲ್ಲ. ಸದನಕ್ಕೆ ಸಚಿವರು, ಸದಸ್ಯರು ಬಾರದೆ ಸರಕಾರ ಕಾಲಹರಣ ಮಾಡುತ್ತಿದೆ. ಸಭಾನಾಯಕರು ಇಲ್ಲ, ಸದಸ್ಯರೂ ಇಲ್ಲ. ಸರಕಾರ ಬೇಜವಾಬ್ದಾರಿ ಕೆಲಸ ಮಾಡುತ್ತಿದೆ. ಜನರಿಂದ ಛೀಮಾರಿ ಹಾಕಿಸಿಕೊಂಡು ಹೋಗುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದರು.
ಕ್ಷುಲ್ಲಕ ಕಾರಣಗಳಾಗಿ ಸರಕಾರ ಈ ರೀತಿ ನಡೆದುಕೊಳ್ಳಬಾರದು. ಸರಕಾರದ ನಡೆಯನ್ನು ಖಂಡಿಸುತ್ತೇವೆ. ಉತ್ತರಕರ್ನಾಟಕವನ್ನು ಸರಕಾರ ಸಂಪೂರ್ಣ ನಿರ್ಲಕ್ಷ ಮಾಡುತ್ತಿದೆ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ನಾಪತ್ತೆಯಾಗಿದೆ, ಕಳೆದುಹೋಗಿದೆ. ಹುಡುಕಿಕೊಡಿ ಎಂದು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಬೇಕಾಗುತ್ತದೆ ಎಂದರು. ಈ ವೇಳೆ ಬಿಜೆಪಿ ಸದಸ್ಯರೆಲ್ಲರೂ ಸರಕಾರಕ್ಕೆ ಧಿಕ್ಕಾರ ಕೂಗಿದರು.
ಉತ್ತರಕರ್ನಾಟಕಕ್ಕೆ ಅಪಮಾನ ಮಾಡುತ್ತಿದೆ. ಉತ್ತರಕರ್ನಾಟಕದ ಪಾಲಿಗೆ ಸರಕಾರ ಸತ್ತುಹೋಗಿದೆ ಎಂದು ಸರಕಾರ ವಿರುದ್ಧ ಬಿಜೆಪಿ , ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗಿದರು. ಸಚಿವರ ಅಲಭ್ಯತೆ ಕಾರಣದಿಂದಾಗಿ ಸದನವನ್ನು 10 ನಿಮಿಷ ಮುಂದೂಡಲಾಯಿತು.
