ಬೆಂಗಳೂರು, ಜ.6-ಹಿಂದೂ ಮಹಾ ಸಾಗರದ ಶ್ರೀಲಂಕಾ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಜ.8ರಿಂದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗುವ ಮುನ್ಸೂಚನೆಗಳಿವೆ.
ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಜೊತೆಗೆ ಶೀತ ಗಾಳಿಯೂ ಆಗಾಗ್ಗೆ ಬೀಸಲಿದೆ. ಇದರಿಂದ ಬೆಳಗಿನ ಜಾವ ತೀವ್ರ ಚಳಿ ಕಂಡು ಬರಲಿದೆ. ಬಹಳಷ್ಟು ಕಡೆಗಳಲ್ಲಿ ಮಂಜು ಕವಿದ ವಾತಾವರಣವಿರಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಇನ್ನೊಂದು ವಾರ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಆದರೆ, ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ ಕಡಿಮೆಯಾಗಲಿದ್ದು, ಚಳಿಯ ಪ್ರಮಾಣ ಹೆಚ್ಚಾಗಲಿದೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನ ವಾಡಿಕೆ ಪ್ರಮಾಣದಲ್ಲಿರುವ ಮುನ್ಸೂಚನೆಗಳು ಕಂಡುಬರುತ್ತಿವೆ.ಕಳೆದ ನಾಲ್ಕೈದು ದಿನಗಳಿಂದ ಮತ್ತೆ ತಂಪಾದ ಗಾಳಿ ಬೀಸುತ್ತಿದ್ದು, ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಹಗಲು ವೇಳೆ ಬಿಸಿಲು ಕಂಡು ಬಂದರೂ ಶೀತಗಾಳಿಯಿಂದ ಚಳಿಯ ಅನುಭವಾಗುತ್ತಿದೆ. ಸಂಜೆ, ರಾತ್ರಿ ಹಾಗೂ ಮುಂಜಾನೆ ಚಳಿ ಹೆಚ್ಚಾಗಿರುತ್ತದೆ.
ವಾಯುಭಾರ ಕುಸಿತದ ನೇರ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ. ಹೀಗಾಗಿ ಭಾರಿ ಮಳೆಯ ಮುನ್ಸೂಚನೆಗಳಿಲ್ಲ. ಪರೋಕ್ಷ ಪರಿಣಾಮದಿಂದ ಜ.8ರಿಂದ ಮೂರ್ನಾಲ್ಕು ದಿನಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ ಕಂಡು ಬರಲಿದೆ. ಕೆಲವೆಡೆ ಮಾತ್ರ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ
