ಮಂಗಳೂರು, ಡಿ.21-ನಿರ್ಬಂಧದ ನಡುವೆಯೂ ಕೋಳಿ ಅಂಕ (ಜೂಜಾಟ) ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೊತ್ತೂರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲಾದ ಕಾಪು ಬಳಿ ಕಳೆದ ರಾತ್ರಿ ನಡೆದ ಸಾಂಪ್ರದಾಯಿಕ ಕೋಳಿ ಜಗಳ ಪಂದ್ಯಕ್ಕೆ ಶಾಸಕರು ಚಾಲನೆ ನೀಡಿದ್ದರು.
ಈ ಸಂಬಂಧ ವಿಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಬಾಹಿರವಾಗಿ ಕೋಳಿ ಪಂದ್ಯ ನಡೆಸಲು ಶಾಸಕರು ಪ್ರಚೋದನೆ ನೀಡಿದ್ದಾರೆ ಎಂದು ಶಾಸಕರ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದರ ನಡುವೆ 22 ಹುಂಜ ಹಾಗೂ ಕತ್ತಿ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐತಿಹಾಸಿಕ ಉಳ್ಳಟ್ಟಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ವೇಳೆ ಕೋಳಿ ಅಂಕವನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಅದನ್ನು ನಿರ್ಬಂಧಿಸಲಾಗಿತ್ತು.
ಆದರೂ ಗ್ರಾಮಸ್ಥರು ಪೊಲೀಸರ ನಡೆ ಬಗ್ಗೆ ಶಾಸಕರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪಂದ್ಯದ ವೇಳೆ ಆಗಮಿಸಿದ ಪೊಲೀಸರನ್ನು ಕಂಡು ಶಾಸಕರು ಗರಂ ಆಗಿ ನೀವು ಕ್ರಿಕೆಟ್ ಬೆಟ್ಟಿಂಗ್, ಕುದುರೆ ಬೆಟ್ಟಿಂಗ್ ಎಲ್ಲದಕ್ಕೂ ಅವಕಾಶ ಕೊಡುತ್ತೀರ. ಆದರೆ, ಸಾಂಪ್ರದಾಯಿಕ ಆಚರಣೆಗೆ ನೀವು ಅಡ್ಡಿಯಾಗುತ್ತಿದ್ದೀರ ಎಂದು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
