Sunday, January 11, 2026
Homeರಾಜ್ಯಭ್ರಷ್ಟಾಚಾರ ತಡೆಗಾಗಿ ನರೇಗಾ ಯೋಜನೆಯಲ್ಲಿ ತಿದ್ದುಪಡಿ : ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ತಡೆಗಾಗಿ ನರೇಗಾ ಯೋಜನೆಯಲ್ಲಿ ತಿದ್ದುಪಡಿ : ಎಚ್‌.ಡಿ.ಕುಮಾರಸ್ವಾಮಿ

Amendments to NREGA scheme to curb corruption: H.D. Kumaraswamy

ಬೆಂಗಳೂರು,ಜ.10- ಮಾಜಿ ಪ್ರಧಾನಿ ದಿ. ಮನಮೋಹನ್‌ ಸಿಂಗ್‌ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಕಡಿವಾಣ ಹಾಕಲು ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮನ್ರೇಗಾ ಯೋಜನೆಯಡಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು. ನಕಲಿ ಜಾಬ್‌ಕಾರ್ಡ್‌ಗಳನ್ನು ಸೃಷ್ಟಿಸಿ ಅರ್ಹ ಫಲಾನುಭವಿಗಳನ್ನು ಬಿಟ್ಟು ನಕಲಿ ಫಲಾನುಭವಿಗಳ ಖಾತೆಗಳಿಗೆ ಹಣ ಸಂದಾಯವಾಗಿತ್ತು. ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದಲೇ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರುಗಳಾದ ಆರ್‌.ಅಶೋಕ್‌ ಮತ್ತು ಛಲವಾದಿ ನಾರಾಯಣಸ್ವಾಮಿಯವರ ಜೊತೆ ಖಾಸಗಿ ಹೋಟೆಲ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನ ಉಭಯಸದನಗಳಲ್ಲಿ ಅಂಗೀಕರಿಸಿದ್ದ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ತಿದ್ದುಪಡಿಯನ್ನು ಸಮರ್ಥನೆ ಮಾಡಿಕೊಂಡರು.

ಕರ್ನಾಟಕದ ಅನೇಕ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಮನ್ರೇಗಾ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ. ಕೊಪ್ಪಳದಲ್ಲಿ ಮಹಿಳೆಯೊಬ್ಬರು ನನಗೆ ಸರ್ಕಾರ ಕುರಿ ಕೊಡಲಿಲ್ಲ ಎಂದು ತಗಾದೆ ತೆಗೆದಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಈ ಮಹಿಳೆಗೆ ನಕಲಿ ಜಾಬ್‌ಕಾರ್ಡ್‌ ಸೃಷ್ಟಿಸಿ ಉದ್ಯೋಗ ಮಾಡಿದ್ದಾರೆ ಎಂದು ಅವರ ಖಾತೆಗೆ ಹಣ ಹಾಕಿತ್ತು. ಇದು ಒಂದು ಸಣ್ಣ ಉದಾಹರಣೆಯಷ್ಟೇ ಎಂದರು.

ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿಯವರು ಇದನ್ನೇ ಉಲ್ಲೇಖಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ನಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಿಬಿಐ ತನಿಖೆ ಇಲ್ಲವೇ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ನಾವೇನೂ ಇವರ ಸವಾಲಿಗೆ ಹೆದರಿ ಇಲ್ಲವೇ ಕೈಕಟ್ಟಿ ಕೂರುವುದಿಲ್ಲ. ಚರ್ಚೆ ಮಾಡೋಣ. ಮೊದಲು ಇದರಲ್ಲಾಗಿರುವ ಲೋಪದೋಷಗಳನ್ನು ಸರಿಪಡಿಸಿ. ದುರಹಂಕಾರದ ಮಾತುಗಳು ಬೇಡ ಎಂದು ಕಿವಿಮಾತು ಹೇಳಿದರು.

ಅಷ್ಟಕ್ಕೂ ಕೇಂದ್ರ ಸರ್ಕಾರ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿಲ್ಲ. ಕಾಲ ಬದಲಾದಂತೆ ಯೋಜನೆಗಳನ್ನು ತಿದ್ದುಪಡಿ ಮಾಡುವುದು ಸಹಜ ಪ್ರಕ್ರಿಯೆ. ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್‌‍ನವರು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮನಮೋಹನಸಿಂಗ್‌ ಅವರು ಸದುದ್ದೇಶದಿಂದ ಯೋಜನೆಯನ್ನು ಜಾರಿ ಮಾಡಿದ್ದರು. ಆದರೆ ಕಾಂಗ್ರೆಸ್‌‍ ಸರ್ಕಾರ ಇದನ್ನು ಸಾಕಷ್ಟು ದುರುಪಯೋಗಪಡಿಸಿಕೊಂಡಿದೆ. ತಮಗೆ ಮತ ಹಾಕುವವರಿಗೆ ಜಾಬ್‌ ಕಾರ್ಡ್‌ಗಳನ್ನು ಸೃಷ್ಟಿಸಿ ಹಣ ನೀಡಿದೆ. ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ವಿರೋಧ ಏಕೆ? ಎಂದು ಪ್ರಶ್ನೆ ಮಾಡಿದರು.

2004 ರಿಂದ 2014 ರವರೆಗೆ ಕರ್ನಾಟಕಕ್ಕೆ ಮನ್ರೇಗಾ ಯಜನೆಯಡಿ 1660 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 2014 ರಿಂದ ಈವರೆಗೂ 3210 ಕೋಟಿ ರೂ. ಬಿಡುಗಡೆಯಾಗಿದೆ.

ಯುಪಿಎ ಅವಧಿಯಲ್ಲಿ 2006 ರಿಂದ 2013 ರವರೆಗೆ 2 ಲಕ್ಷ ಕೋಟಿಗೂ ಅಧಿಕ ಉದ್ಯೋಗಗಳು ಸೃಜನೆಯಾದರೆ ಮೋದಿಯವರ ಅವಧಿಯಲ್ಲಿ 8 ಲಕ್ಷ ಕೋಟಿಗೂ ಅಧಿಕ ಉದ್ಯೋಗಗಳು ಸೃಜನೆಯಾಗಿವೆ ಎಂದು ಅಂಕಿ ಸಂಖ್ಯೆಗಳ ವಿವರ ನೀಡಿದರು.

ಲೀಜ್‌ ಸಿಎಂ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಜನರ ಆಶೀರ್ವಾದದಿಂದ ಅಧಿಕಾರದಲ್ಲಿದ್ದೇನೆ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ದಾಖಲೆಯನ್ನು ಮುರಿದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಸಿದ್ದರಾಮಯ್ಯನವರು ಲೀಜ್‌ ಮೇಲೆ ಇರುವ ಸಿಎಂ. ಅವರೇ ಹೇಳುವಂತೆ ಪಕ್ಷದ ಹೈಕಮಾಂಡ್‌ ಎಲ್ಲಿಯ ತನಕ ಹೇಳುತ್ತಾರೋ ಅಲ್ಲಿಯ ತನಕ ಅಧಿಕಾರದಲ್ಲಿ ಇರುತ್ತೇನೆ ಎನ್ನುತ್ತಿದ್ದಾರೆ. ಹಾಗಾಗಿ ಇವರು ಲೀಜ್‌ ಸಿಎಂ ಎಂದು ವ್ಯಂಗ್ಯವಾಡಿದರು.

ಅಧಿಕಾರದಲ್ಲಿ ಎಷ್ಟು ದಿನ ಇದ್ದೆ ಎನ್ನುವುದು ಮುಖ್ಯ ಅಲ್ಲ. ಇರುವ ದಿನಗಳಲ್ಲಿ ನಾಲ್ಕಾರು ಜನರಿಗೆ ಎಷ್ಟು ಉಪಕಾರವಾಗಿದೆ ಎಂಬುದು ಮುಖ್ಯ. ದಾಖಲೆಗಳಿರುವುದೇ ಅಳಿಸಿ ಹಾಕಲು. ಇದರಲ್ಲಿ ವಿಶೇಷತೆ ಏನಿದೆ? ಎಂದು ಪ್ರಶ್ನಿಸಿದರು.ಕಡೇಪಕ್ಷ ದೇವರಾಜ ಅರಸು ಕಾಂಗ್ರೆಸ್‌‍ ಹೈಕಮಾಂಡ್‌ ಎದುರುಹಾಕಿಕೊಂಡು ಪಕ್ಷದಿಂದ ಹೊರಬಂದಿದ್ದರು. ಆದರೆ ಇದೇ ಸಿದ್ದರಾಮಯ್ಯ ಈಗ ಹೈಕಮಾಂಡ್‌ ಕೃಪಾಕಟಾಕ್ಷದಿಂದ ಅಧಿಕಾರದಲ್ಲಿದ್ದಾರೆ. ಎಂದಾದರೂ ಅವರ ಬಗ್ಗೆ ಒಂದೇ ಒಂದು ಮಾತನ್ನಾಡಿದ್ದಾರೆಯೇ? ಎಂದು ಕುಮಾರಸ್ವಾಮಿ ಸಿಡಿಮಿಡಿಗೊಂಡರು.

RELATED ARTICLES

Latest News