ಬೆಳಗಾವಿ,ಡಿ.10- ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ತಮ್ಮ ತೋಳಿಗೆ ಧರಿಸಿದ್ದ ಕಪ್ಪು ಪಟ್ಟಿ ತೆಗೆಸಲು ಸಭಾಧ್ಯಕ್ಷರು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಜಂಟಿಯಾಗಿ ಮನವೊಲಿಸಿದ ಪ್ರಕರಣ ನಡೆಯಿತು. ಅರವಿಂದ್ ಬೆಲ್ಲದ್ ಅವರು ಧರಿಸಿದ್ದ ಕಪ್ಪು ಪಟ್ಟಿಯನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಕಾರಣ ಕೇಳಿದರು.
ಲಿಂಗಾಯತ ಸಮುದಾಯದ ಮೇಲೆ ದೌರ್ಜನ್ಯ ನಡೆದು ಒಂದು ವರ್ಷವಾಗಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಹೇಳಬೇಕು. ಇದಕ್ಕಾಗಿ ರಚಿಸಲಾಗಿದ್ದ ವಿಚಾರಣಾ ಆಯೋಗದ ವರದಿಯ ಸಾರಾಂಶಗಳೇನು ಎಂದು ಪ್ರಶ್ನಿಸಿದರು. ಲಿಂಗಾಯತರ ಮೇಲಿನ ದೌರ್ಜನ್ಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸದನದಲ್ಲಿ ಬಾವುಟಗಳು, ಲಾಂಛನಗಳು ಅಥವಾ ಯಾವುದೇ ನಿಶಾನೆಗಳನ್ನು ಬಳಸುವಂತಿಲ್ಲ ಎಂಬ ನಿಯಮಗಳಿವೆ. ಅರವಿಂದ್ ಬೆಲ್ಲದ್ ಅವರು ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಸಭಾಧ್ಯಕ್ಷರು ಉಪನಾಯಕರಾಗಿರುವ ತಾವೇ ಈ ರೀತಿ ನಿಯಮ ಉಲ್ಲಂಘನೆ ಮಾಡುವುದು ಸರಿಯಲ್ಲ ಎಂದು ತಿಳಿ ಹೇಳಿದಾಗ ಬೆಲ್ಲದ ಅವರು ತಮ ಕಪ್ಪು ಪಟ್ಟಿಯನ್ನು ತೆರವು ಮಾಡಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಅರವಿಂದ್ ಬೆಲ್ಲದ್ ಅವರು ಪ್ರಸ್ತಾಪಿಸಿರುವ ವಿಚಾರಗಳ ಚರ್ಚೆಗೆ ಕಾಲಾವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಇದಕ್ಕೆ ಸಭಾಧ್ಯಕ್ಷರು ಸ್ಪಂದಿಸಿದರು.
