ಬೆಂಗಳೂರು,ಜ.2- ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆದಿರುವ ಗಲಭೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸೂಚಿಸಿರುವ ಬಿಜೆಪಿ ದೆಹಲಿ ವರಿಷ್ಠರು, ಪಕ್ಷವು ಜನಾರ್ದನ ರೆಡ್ಡಿ ಪರವಾಗಿ ನಿಲ್ಲಬೇಕೆಂದು ಸೂಚಿಸಿದೆ. ಕೇಂದ್ರ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಶಿಕಾರಿಪುರ ಪ್ರವಾಸದಲ್ಲಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಂಜೆ ಬಳ್ಳಾರಿಗೆ ತೆರಳುತ್ತಿದ್ದು, ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಲಿದ್ದಾರೆ.
ಈಗಾಗಲೇ ದೂರವಾಣಿ ಮೂಲಕ ಇಬ್ಬರ ಜೊತೆ ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಧೃತಿಗೆಡದೆ ಕಾನೂನು ಮೂಲಕವೇ ಎಲ್ಲವನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ಮಾಡಿದ್ದಾರೆ. ಇದು ದುರದ್ದೇಶಪೂರ್ವಕವಾಗಿಯೇ ನಡೆದಿರುವ ಗಲಭೆಯಾಗಿದೆ.
ಬಳ್ಳಾರಿಯ ಹಾವಂಭಾವಿ ಪ್ರದೇಶದಲ್ಲಿರುವ ಜನಾರ್ಧನ ರೆಡ್ಡಿ ನಿವಾಸದ ಬಳಿ ಶಾಸಕ ಭರತ್ ನಾರಾರೆಡ್ಡಿ ಹಾಗೂ ಅವರ ಆಪ್ತ ಸತೀಶ್ ರೆಡ್ಡಿ ಗಲಾಟೆ ನಡೆಸಲೆಂದೇ ಬ್ಯಾನರ್ ಹಾಕಿದ್ದಾರೆ. ಇಡೀ ಗಲಭೆಗೆ ಅವರೇ ಕಾರಣೀಭೂತರಾಗಿರುವುದರಿಂದ ಪಕ್ಷವು ರೆಡ್ಡಿ ಮತ್ತು ರಾಮುಲು ಬೆಂಬಲಕ್ಕೆ ನಿಲ್ಲಬೇಕೆಂದು ನಿರ್ದೇಶನ ನೀಡಿದೆ.
ಪಕ್ಷದ ಹೈಕಮಾಂಡ್ ಸೂಚನೆ ಕೊಡುತ್ತಿದ್ದಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಇದು ಸರ್ಕಾರದ ಪೂರ್ವ ನಿಯೋಜಿತ ಗಲಭೆ ಎಂದು ಕಿಡಿಕಾರಿದ್ದಾರೆ.
ಇಡೀ ಬಿಜೆಪಿ ಬಳ್ಳಾರಿ ಗಲಭೆಯಲ್ಲಿ ರೆಡ್ಡಿ, ರಾಮುಲು ಬೆಂಬಲಕ್ಕೆ ನಿಂತಿದ್ದು, ಮುಂದೆ ನಡೆಯುವ ಬೆಳವಣಿಗೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
