Wednesday, January 7, 2026
Homeರಾಜ್ಯಬಳ್ಳಾರಿ ಘರ್ಷಣೆ : ಶಾಸಕ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿಯ ಮೂವರು ಖಾಸಗಿ ಅಂಗರಕ್ಷಕರ ಬಂಧನ

ಬಳ್ಳಾರಿ ಘರ್ಷಣೆ : ಶಾಸಕ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿಯ ಮೂವರು ಖಾಸಗಿ ಅಂಗರಕ್ಷಕರ ಬಂಧನ

Bellary clash: Three private bodyguards of Satish Reddy arrested

ಬೆಂಗಳೂರು,ಜ.4- ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿರುವ ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಶಾಸಕ ನಾರಾ ಭರತ್‌ರೆಡ್ಡಿ ಆಪ್ತ ಸತೀಶ್‌ರೆಡ್ಡಿ ಅವರ ಮೂವರು ಖಾಸಗಿ ಅಂಗರಕ್ಷಕರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದ ಸತೀಶ್‌ರೆಡ್ಡಿಯವರ ಆಪ್ತ ಅಂಗರಕ್ಷಕರಾದ ಪಂಜಾಬ್‌ ಮೂಲದ ಬಲ್ಜಿತ್‌ಸಿಂಗ್‌, ಗುರು ಚರಣ್‌ಸಿಂಗ್‌ ಹಾಗೂ ಮಹೇಂದ್ರ ಸಿಂಗ್‌ ಎಂಬುವರನ್ನು ಬಳ್ಳಾರಿಯ ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಖಾಸಗಿ ಏಜೆನ್ಸಿ ಮೂಲಕ ಸತೀಶ್‌ ರೆಡ್ಡಿ ಆಪ್ತ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದ ಈ ಮೂವರು ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ಗುರುವಾರ ರಾತ್ರಿ ಶಾಸಕ ನಾರಾ ಭರತ್‌ರೆಡ್ಡಿ ಹಾಗೂ ಜನಾರ್ದನರೆಡ್ಡಿ ಬೆಂಬಲಿಗರ ನಡುವೆ ಭಾರೀ ಮಾರಾಮಾರಿ ನಡೆದಿತ್ತು. ಈ ವೇಳೆ ಸತೀಶ್‌ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ತಮ ಬಳಿ ಇದ್ದ ಬಂದೂಕಿನಿಂದ 12 ಎಂಎಂ-ಸಿಂಗಲ್‌ಬೋರ್‌ನ ಗುಂಡನ್ನು ಹಾರಿಸಿದ್ದರು.

ಈ ಗುಂಡು ಘಟನಾ ಸ್ಥಳದಲ್ಲಿದ್ದ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಎಂಬುವರ ಬೆನ್ನಿಗೆ ತಗುಲಿ ಮೃತಪಟ್ಟಿದ್ದರು. ಪ್ರಕರಣದ ನಂತರ ಪೊಲೀಸರು ಬಂದೂಕುಗಳನ್ನು ವಶಪಡಿಸಿಕೊಂಡು ಎಫ್‌ಎಸ್‌‍ಎಲ್‌ ವರದಿಗೆ ಕಳುಹಿಸಿಕೊಟ್ಟಿದ್ದರು.

ಜನಾರ್ದನರೆಡ್ಡಿ, ಶ್ರೀರಾಮಲು, ನಾರಾ ಭರತ್‌ರೆಡ್ಡಿ ಹಾಗೂ ಸತೀಶ್‌ರೆಡ್ಡಿಯವರ ಅಂಗರಕ್ಷಕರ ಗನ್‌ಗಳು ಹಾಗೂ ಅದರಲ್ಲಿದ್ದ ಗುಂಡುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆಗೊಳಪಡಿಸಿದ್ದರು.

ರಾಜಶೇಖರ್‌ ದೇಹದಲ್ಲಿದ್ದ ಗುಂಡಿಗೂ, ಸತೀಶ್‌ರೆಡ್ಡಿ ಅಂಗರಕ್ಷಕರ ಗುಂಡಿಗೂ ಒಂದಕ್ಕೊಂದು ಹೋಲಿಕೆಯಾಗುತ್ತಿದ್ದರಿಂದ ಬಂಧಿಸಲಾಗಿದೆ. ಇದರ ಜೊತೆಗೆ ಗಲಭೆ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳು ಮತ್ತು ಗುಪ್ತಚರ ವಿಭಾಗದ ವರದಿಯನ್ನು ಪರಿಗಣಿಸಿ ಬಂಧನ ಮಾಡಲಾಗಿದೆ.

ಈ ಆಪ್ತರಕ್ಷಕರು ಸುಮಾರು ಹತ್ತರಿಂದ ಹನ್ನೆರೆಡು ಅಡಿ ದೂರದಿಂದ ಗುಂಡು ಹಾರಿಸಿದ್ದರಿಂದ ಅದು ಒಬ್ಬರಿಗೆ ಮಾತ್ರ ತಗುಲಿದೆ. ಒಂದು ವೇಳೆ ನಾಲ್ಕರಿಂದ ಐದು ಅಡಿ ದೂರದಲ್ಲಿ ಗುಂಡು ಹಾರಿಸಿದ್ದರೆ ಕನಿಷ್ಠ ಪಕ್ಷ 4 ರಿಂದ 5 ಜನರ ದೇಹದೊಳಗೆ ಹೊಕ್ಕುವ ಸಾಧ್ಯತೆ ಇತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪೂರ್ವ ನಿಯೋಜಿತ ಕೃತ್ಯ :
ಗುರುವಾರ ರಾತ್ರಿ ನಡೆದ ಗಲಭೆಯು ಪೂರ್ವನಿಯೋಜಿತ ಕೃತ್ಯ ಎಂಬುದು ಸಾಬೀತಾಗುತ್ತಿದೆ. ಜನಾರ್ದನ ರೆಡ್ಡಿ ಮನೆಗೆ ಬಂದಿದ್ದ ಕೆಲವು ದುಷ್ಕರ್ಮಿಗಳು ಆಟೋದಲ್ಲಿ ಪೆಟ್ರೋಲ್‌ ಬಾಂಬ್‌, ಬಡಗಿ, ಮಚ್ಚು, ಲಾಂಗುಗಳನ್ನು ಹಾಕಿಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಎದುರಾಳಿಗಳು ರೆಡ್ಡಿಯನ್ನು ಗುರಿಯಾಗಿಟ್ಟುಕೊಂಡು ಪೂರ್ವ ನಿಯೋಜಿತವಾಗಿಯೇ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ.

RELATED ARTICLES

Latest News