Monday, January 5, 2026
Homeರಾಜ್ಯಬಳ್ಳಾರಿ ಗಲಭೆ ಪ್ರಕರಣ ಸಿಐಡಿ ತನಿಖೆಗೆ

ಬಳ್ಳಾರಿ ಗಲಭೆ ಪ್ರಕರಣ ಸಿಐಡಿ ತನಿಖೆಗೆ

Bellary riot case to be investigated by CID

ಬೆಂಗಳೂರು, ಜ.4- ಬಳ್ಳಾರಿಯಲ್ಲಿ ನಡೆದ ಗುಂಪು ಗಲಭೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಪರಿಶೀಲಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ನಗರದಲ್ಲಿಂದ್ದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ಗಲಭೆಗೆ ಸಂಬಂಧಪಟ್ಟಂತೆ ಖಾಸಗಿ ವ್ಯಕ್ತಿಗಳ ಬಂದೂಕು ಮತ್ತು ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಪರಿಶೀಲನೆಗೆ ಎಫ್‌ ಎಸ್‌‍ ಎಲ್‌ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದರು.

ಯಾರ ಬಂದೂಕಿನಿಂದ ಬುಲೆಟ್‌ ಹಾರಿದೆ ಎಂಬುದನ್ನು ಎಫ್‌ ಎಸ್‌‍ ಎಲ್‌ ವರದಿ ಬಳಿಕ ತಿಳಿಯಲಿದೆ. ಪೊಲೀಸ್‌‍ ಅಧಿಕಾರಿಗಳ ಬಂದೂಕಿನಿಂದ ಗುಂಡು ಹಾರಿಲ್ಲ ಎಂದು ಎಡಿಜಿಪಿಯವರು ತಿಳಿಸಿದ್ದಾರೆ. ಖಾಸಗಿ ವ್ಯಕ್ತಿಗಳ ಗನ್‌ ಮ್ಯಾನ್‌ ಬಂದೂಕಿನಿಂದಲೇ ಗುಂಡು ಹಾರಿರುವುದು ಖಚಿತವಾಗಿದೆ. ಆದರೂ ಪರಿಶೀಲನೆಯ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಘಟನೆಯನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.ಶಾಸಕ ಭರತ್‌ ರೆಡ್ಡಿಯನ್ನು ಬಂಧಿಸದಿದ್ದರೆ ಪಾದಯಾತ್ರೆ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಂಧಿಸುವುದು ದೊಡ್ಡ ವಿಚಾರ ಅಲ್ಲ. ಆದರೆ ಕಾನೂನಿನ ಅಂಶಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕಿದೆ. ಗುಂಡು ಹಾರಿದ್ದರ ಬಗ್ಗೆ ಪತ್ತೆ ಹಚ್ಚಿ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ. ಆದರೆ ಈ ಸಂದರ್ಭದಲ್ಲಿ ಸೂಕ್ತ ಪುರಾವೆಗಳನ್ನು ಕಲೆ ಹಾಕಬೇಕಿದೆ ಎಂದರು.

ತಮಗೆ ಜೆಡ್‌ ಪ್ಲಸ್‌‍ ರಕ್ಷಣೆ ಒದಗಿಸಬೇಕೆಂದು ಶಾಸಕ ಜನಾರ್ದನ ರೆಡ್ಡಿ ಬರೆದಿರುವ ಪತ್ರ ನನಗೆ ತಲುಪಿಲ್ಲ. ಪತ್ರ ಬಂದರೆ ಸೂಕ್ತ ಕ್ರಮ ತೆಗದುಕೊಳ್ಳಲಾಗುವುದು. ಘಟನೆಗೆ ಸಂಬಂಧಪಟ್ಟಂತೆ ಶಾಸಕ ನ.ರಾ.ಭರತ್‌ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಇಬ್ಬರೂ ದೂರು ನೀಡಿದ್ದಾರೆ. ಎರಡು ದೂರನ್ನೂ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಪೆಟ್ರೋಲ್‌ ಬಾಂಬ್‌ ಬಳಕೆಯಾಗಿದ್ದರೇ ಅದನ್ನು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಬರುವ ಮುನ್ನ ಅಲ್ಲಿ ಯಾವುದೇ ಗಲಾಟೆಗಳಾಗಿರಲಿಲ್ಲ. ಅವರು ಬಂದ ಬಳಿಕ ಗಲಾಟೆಗಳಾಗುತ್ತಿವೆ. ಇದು ಕಾಕತಾಳೀಯ ಇರಬಹುದು ಎಂದರು.
ಘಟನೆಗೆ ಸಂಬಂಧಪಟ್ಟಂತೆ ತಕ್ಷಣವೇ ಬಳ್ಳಾರಿಯಿಂದ ವರ್ಗಾವಣೆಯಾದ ಕಾರಣಕ್ಕಾಗಿ ಅಲ್ಲಿನ ಜಿಲ್ಲಾ ಪೊಲೀಸ್‌‍ ಮುಖ್ಯ ಅಧಿಕಾರಿಯವರಿಗೆ ಬೇಸರ ಇರಬಹುದು. ಅವರು ಅಲ್ಲಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ಸ್ನೇಹಿತರ ಫಾರಂ ಹೌಸ್‌‍ ನಲ್ಲಿ ವಿಶ್ರಾಂತಿ ಪಡೆದು, ಈಗ ಬೆಂಗಳೂರಿಗೆ ಬಂದಿದ್ದಾರೆ ಎಂದು ಮನೆಯವರಿಗೆ ಮಾಹಿತಿ ಇದೆ ಎಂದು ತಿಳಿಸಿದರು.

ಬಳ್ಳಾರಿಯ ಘಟನೆ ಬಳಿಕ ಖಾಸಗಿ ವ್ಯಕ್ತಿಗಳಿಗೆ ಬಂದೂಕು ನೀಡುವ ಪರವಾಗಿಯ ನಿಯಮಗಳನ್ನು ಬಿಗಿಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ನಿಯಮಗಳಿವೆ. ರಾಜ್ಯ ಸರ್ಕಾರ ಅದನ್ನು ಅಳವಡಿಸಿಕೊಂಡಿದೆ. ಮತ್ತಷ್ಟು ಸುಧಾರಣೆಯ ಅಗತ್ಯ ಇದ್ದರೆ ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಅದು ರಾಷ್ಟ್ರಮಟ್ಟದಲ್ಲಿಯೇ ಬದಲಾಗಬೇಕು ಎಂದು ಹೇಳಿದರು.

RELATED ARTICLES

Latest News