ಬೆಂಗಳೂರು,ಜ.7- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿನ ವಾಕ್ಸಮರಕ್ಕೆ ಕಾರಣವಾಗಿರುವ ಬಳ್ಳಾರಿ ಗಲಭೆ ಪ್ರಕರಣದಲ್ಲಿ ಮತ್ತೋರ್ವ ಐಪಿಎಸ್ ಅಧಿಕಾರಿ ಎತ್ತಂಗಡಿಯಾಗಿದೆ.ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪವನ್ ನೆಜ್ಜೂರ್ ಅಮಾನತುಗೊಳಿಸಿದ ಬೆನ್ನಲ್ಲೇ ರಾಜ್ಯಸರ್ಕಾರ ಬಳ್ಳಾರಿ ವಲಯ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ತೆರವಾಗಿರುವ ಈ ಸ್ಥಾನಕ್ಕೆ ಹುದ್ದೆ ನಿರೀಕ್ಷೆಯಲ್ಲಿದ್ದ ಡಾ.ಪಿ.ಎಸ್.ಹರ್ಷ ಅವರನ್ನು ಬಳ್ಳಾರಿ ವಲಯದ ಐಜಿಪಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.ವರ್ಗಾವಣೆಗೊಂಡಿರುವ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.
ಕಳೆದ ಗುರುವಾರ ಬಳ್ಳಾರಿಯ ಎಸ್‌ಪಿ ವೃತ್ತದಲ್ಲಿ ಫ್ಲೆಕ್‌್ಸ ಅಳವಡಿಕೆ ಸಂಬಂಧ ಶಾಸಕರಾದ ಗಾಲಿ ಜನಾರ್ದನರೆಡ್ಡಿ ಮತ್ತು ನಾರಾ ಭರತ್‌ರೆಡ್ಡಿ ಅವರ ಬೆಂಬಲಿಗರ ನಡುವೆ ಭಾರೀ ಮಾರಾಮಾರಿ ನಡೆದಿತ್ತು.
ಘಟನೆಯಲ್ಲಿ ಖಾಸಗಿ ಅಂಗರಕ್ಷಕರೊಬ್ಬರು ಹಾರಿಸಿದ ಗುಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬೆನ್ನಿಗೆ ತಗುಲಿ ಸಾವನ್ನಪ್ಪಿದ್ದರು. ಈ ಘಟನೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ರಾಜಕೀಯ ಚಟುವಟಿಕೆಗೆ ಕಾರಣವಾಗಿತ್ತು.
ಕರ್ತವ್ಯಲೋಪ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಇವರ ಸ್ಥಾನಕ್ಕೆ ಡಾ.ಸುಮನ್ ಡಿ. ಪೆನ್ನಿಕರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ಪೊಲೀಸರು ಕಾಂಗ್ರೆಸ್ ಮತ್ತು ಬಿಜೆಪಿಗೆ ಸೇರಿದ ಹಲವು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
