Monday, January 12, 2026
Homeರಾಜ್ಯದ್ವೇಷಭಾಷಣ ತಡೆ ವಿಧೇಯಕಕ್ಕೆ ಸಹಿ ಹಾಕದಂತೆ ಗೌರ್ನರ್‌ಗೆ ಬಿಜೆಪಿ ಮನವಿ

ದ್ವೇಷಭಾಷಣ ತಡೆ ವಿಧೇಯಕಕ್ಕೆ ಸಹಿ ಹಾಕದಂತೆ ಗೌರ್ನರ್‌ಗೆ ಬಿಜೆಪಿ ಮನವಿ

BJP appeals to Governor not to sign hate speech ban bill

ಬೆಂಗಳೂರು,ಜ.12- ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ-2025 ಕ್ಕೆ ಸಹಿ ಹಾಕದೆ, ಹಿಂತಿರುಗಿಸುವಂತೆ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ.

ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಮತ್ತಿತರರ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಜನತೆಯ ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025ಕ್ಕೆ ಸಹಿ ಹಾಕದೆ ತಡೆಹಿಡಿಯಬೇಕು ಎಂದು ರಾಜ್ಯಪಾಲರಿಗೆ ಎಂದು ಮನವಿ ಮಾಡಿತು.

ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯಲ್ಲಿ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಇರುವುದರಿಂದ, ಇದಕ್ಕೆ ಪ್ರತ್ಯೇಕ ವಿಧೇಯಕ ಅವಶ್ಯವಿರುವುದಿಲ್ಲ. ಆದರೆ, ಕಾಂಗ್ರೆಸ್‌‍ ಸರ್ಕಾರ ಈ ವಿಧೇಯಕವನ್ನು ಬಳಸಿ ರಾಜಕೀಯ ವಿರೋಧಿಗಳನ್ನು ದಮನಿಸುವ ಕೆಲಸವನ್ನು ಮಾಡುತ್ತಿದೆ ಎಂದು ಮನವಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ವಿಶೇಷವಾಗಿ ಸರ್ಕಾರದ ವಿರುದ್ಧ ಜನತೆ, ಸಂಘಟನೆಗಳು ಮಾಡುವ ರಚನಾತಕ ಟೀಕೆಗಳನ್ನು ಶಿಕ್ಷಾರ್ಹ ಅಪರಾಧವಾಗಿ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಹುನ್ನಾರ ನಡೆಸಿದೆ. ಇಂತಹ ಶಾಸನಕ್ಕೆ ಒಪ್ಪಿಗೆ ನೀಡುವುದು ಅಪಾಯಕಾರಿ ಆಗಿದೆ. ಹೀಗಾಗಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ನ್ಯಾಯದ ಹಿತದೃಷ್ಟಿಯಿಂದ ಈ ವಿಧೇಯಕ ತಡೆಹಿಡಿಯುವುದು ಸೂಕ್ತವೆಂದು ಮನವರಿಕೆ ಮಾಡಿಕೊಡಲಾಗಿದೆ.

ಉಭಯ ಸದನಗಳಲ್ಲೂ ದ್ವೇಷ ಭಾಷಣ ತಡೆ ಕಾಯ್ದೆಗೆ ಪ್ರತಿಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾದರೂ ಇದನ್ನು ಪರಿಗಣಿಸದೆ ಸರ್ಕಾರ ಅಂಗೀಕಾರ ಪಡೆದಿದೆ. ಇದು ಸಂವಿಧಾನದಲ್ಲಿ ಕಲ್ಪಿಸಲಾಗಿರುವ ವಾಕ್‌ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರಲಿದೆ. ಹಾಗಾಗಿ ಈ ಮಸೂದೆಗೆ ಅಂಕಿತ ಹಾಕಬಾರದೆಂದು ಬಿಜೆಪಿ ನಾಯಕರು ಅಧಿವೇಶನದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಈ ವಿಧೇಯಕದ ವಿರುದ್ಧ ಸದನದ ಒಳಗಷ್ಟೇ ಅಲ್ಲದೆ, ಸದನದ ಹೊರಗೂ ಪ್ರತಿಭಟನೆ ನಡೆಸಿ ವಾಪಸ್‌‍ ಪಡೆಯಲು ಆಗ್ರಹಿಸಿದ್ದು ಗಮನಾರ್ಹ.

ವಿಶೇಷವೆಂದರೆ ರಾಜ್ಯಸರ್ಕಾರ ಇತ್ತೀಚೆಗೆ ಕಳುಹಿಸಿದ್ದ 22 ಮಸೂದೆಗಳ ಪೈಕಿ ರಾಜ್ಯಪಾಲರು 19 ಮಸೂದೆಗಳಿಗೆ ಸಹಿ ಹಾಕಿದ್ದರು. ಆದರೆ ಬಹುನಿರೀಕ್ಷಿತ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ-2025ಕ್ಕೆ ಸಹಿ ಹಾಕದೇ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ.

ದ್ವೇಷ ಭಾಷಣ ಎಂದರೆ ಏನು? :
ವಿಧೇಯಕದ ಪ್ರಕಾರ, ದ್ವೇಷ ಭಾಷಣ ಎಂದರೆ ಯಾವುದೇ ವ್ಯಕ್ತಿ (ಸತ್ತವರು ಅಥವಾ ಜೀವಂತವಿರುವವರು), ಗುಂಪು ಅಥವಾ ಸಮುದಾಯದ ವಿರುದ್ಧ ಗಾಯ, ವೈಷಮ್ಯ, ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ಪ್ರಸಾರ ಮಾಡುವ ಯಾವುದೇ ಮಾತು, ಬರಹ, ಸಂಕೇತ, ದೃಶ್ಯ ನಿರೂಪಣೆ ಅಥವಾ ಎಲೆಕ್ಟ್ರಾನಿಕ್‌ ಸಂವಹನವನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ.

ವಿಧೇಯಕದಲ್ಲಿ ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ ಸ್ಥಳ, ವಾಸಸ್ಥಳ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟು ಆಧಾರದ ಮೇಲೆ ಮಾಡುವ ಯಾವುದೇ ತಾರತಮ್ಯದ ಮಾತುಗಳನ್ನು ಪೂರ್ವಗ್ರಹಪೀಡಿತ ಆಸಕ್ತಿಗಳು ಎಂದು ವ್ಯಾಖ್ಯಾನಿಸಲಾಗಿದೆ.

ದ್ವೇಷ ಅಪರಾಧ ಎಂದರೆ ಏನು? :
ದ್ವೇಷ ಅಪರಾಧ ಎಂದರೆ ದ್ವೇಷ ಭಾಷಣವನ್ನು ರಚಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಪ್ರಚಾರ ಮಾಡುವುದು, ಪ್ರಚೋದಿಸುವುದು, ಪ್ರೇರೇಪಿಸುವುದು ಅಥವಾ ಅಂತಹ ಭಾಷಣಕ್ಕೆ ಪ್ರಯತ್ನಿಸುವುದು. ಈ ಕೃತ್ಯಗಳು ಯಾವುದೇ ವ್ಯಕ್ತಿ, ವ್ಯಕ್ತಿಗಳ ಗುಂಪು ಅಥವಾ ಸಂಸ್ಥೆಗಳ ವಿರುದ್ಧ ವೈಷಮ್ಯ, ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ಉದ್ದೇಶದಿಂದ ಕೂಡಿರಬೇಕು.

ನಿಯೋಗದಲ್ಲಿ ಮಾಜಿ ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್‌, ಶಾಸಕರಾದ ಡಾ ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌‍.ಆರ್‌.ವಿಶ್ವನಾಥ್‌, ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್‌ ಸದಸ್ಯರಾದ ಭಾರತಿ ಶೆಟ್ಟಿ, ಕೆ.ಎಸ್‌‍.ನವೀನ್‌, ಕೇಶವಪ್ರಸಾದ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಉತ್ತರ ಜಿಲ್ಲಾಧ್ಯಕ್ಷ ಎಸ್‌‍.ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News