ಬೆಂಗಳೂರು,ಡಿ.24- ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ವಿವಾದಾತಕ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ಅನ್ನು ಯಾವುದೇ ಕಾರಣಕ್ಕೂ ಅಂಗೀಕರಿಸದಂತೆ ಆಗ್ರಹಿಸಿ ಬಿಜೆಪಿ ನಾಳೆ ರಾಜ್ಯಪಾಲರಿಗೆ ದೂರು ನೀಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಲೋಕಭವನ( ರಾಜಭವನ)ಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಿದೆ.
ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಹಾಗೂ ಜೈಲಿಗೆ ಕಳುಹಿಸುವ ಕೆಲಸಕ್ಕಾಗಿ ಈ ಕಾಯ್ದೆ ಜಾರಿಗೆ ತರಲು ಸರ್ಕಾರ ಹೊರಟಿದೆ. ಇದರ ಕುರಿತು ರಾಷ್ಟ್ರಪತಿ ಗಮನ ಸೆಳೆಯಲಿದ್ದೇವೆ. ನ್ಯಾಯಾಂಗದ ಅಧಿಕಾರ ಉಲ್ಲಂಘಿಸಿ ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳೂ ಸೇರಿದಂತೆ ಯಾರನ್ನಾಬೇಕಾದರು ಏಕಾಏಕಿ ಜೈಲಿಗೆ ಹಾಕುವ ಕಾನೂನು ತಂದಿದ್ದಾರೆ. ಈ ಮೂಲಕ ಮತ್ತೊಮೆ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸುತ್ತಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ.
ಈ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕ ಹಾಗೂ ವಿಪಕ್ಷಗಳ ವಿರುದ್ಧ ದುರ್ಬಳಕೆ ಆಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಈ ವಿಧೇಯಕವನ್ನು ಅಂಗೀಕರಿಸಬಾರದು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಿದೆ.
ಏನಿದು ದ್ವೇಷ ಭಾಷಣ ಮಸೂದೆ?
ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯುವ ವಿಧೇಯಕ ಇದಾಗಿದ್ದು, ಯಾವುದೇ ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಪೂರೈಸಲು, ಜೀವಂತ ಅಥವಾ ಸತ್ತ ವ್ಯಕ್ತಿ, ಇಲ್ಲವೇ ವ್ಯಕ್ತಿಗಳ ಗುಂಪಿನ ವಿರುದ್ಧ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಮಾಡಿದ ಭಾಷಣ, ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಯಾವುದೇ ಅಭಿವ್ಯಕ್ತಿ ಹಾಗೂ ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನಸ್ಥಳ, ವಾಸಸ್ಥಳ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟು ಆಧಾರದ ಮೇಲೆ ಯಾವುದೇ ಪಕ್ಷಪಾತವನ್ನು ದ್ವೇಷ ಭಾಷಣ ಎಂದು ವರ್ಗೀಕರಿಸಲಾಗಿದೆ.
ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ ಮತ್ತು ಗರಿಷ್ಠ 7 ವರ್ಷದವರೆಗೆ ಜೈಲುವಾಸ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ದ್ವೇಷ ಭಾಷಣ ಮಾಡಿ ಪ್ರಕರಣ ದಾಖಲಾದರೆ ಅದು ಜಾಮೀನು ರಹಿತ ಪ್ರಕರಣವಾಗಿದ್ದು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು. ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತೀಯ ಕಲಹಗಳಿಗೆ ದ್ವೇಷ ಭಾಷಣ ಪ್ರಮುಖ ಕಾರಣವಾಗಿದೆ. ಮತೀಯವಾದಿ ಸಂಘಟನೆಗಳ ಸಮಾವೇಶಗಳಲ್ಲಿ ದ್ವೇಷ ಭಾಷಣ ಮಾಡುವ ಮೂಲಕ ಜನರನ್ನು ಪ್ರಚೋದನೆ ಮಾಡುವ ಕೆಲಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.
ಮೂರು ವರ್ಷಗಳ ಕಾಲ ಜೈಲು ಶಿಕ್ಷೆ
ದ್ವೇಷ ಭಾಷಣ ಮಾಡಿದರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡುವ ಅವಕಾಶ ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ. ದ್ವೇಷ ಭಾಷಣದ ಮೂಲಕ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡಬಾರದು ಎಂದಿದೆ.
ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ರೂ. ದಂಡದ ಜತೆಗೆ ಶಿಕ್ಷೆ ವಿಧಿಸಬಹುದೆಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ದ್ವೇಷ ಭಾಷಣಕ್ಕೆ ತಡೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.
ಕಳೆದ ಜೂನ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ ಕರಡು ವಿಧೇಯಕ ಪ್ರಸ್ತಾಪ ಮಾಡಲಾಗಿತ್ತು.ವಿಧೇಯಕ ಕಾನೂನು ಆಗಿ ಜಾರಿಗೆ ಬಂದರೆ ರಾಜಕೀಯ ದ್ವೇಷಕ್ಕೆ ಅಪಾಯಕಾರಿ ಅಸ್ತ್ರವಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಇತಿಹಾಸವಿದೆ. ಪೊಲೀಸ್ ರಾಜ್ಯವನ್ನಾಗಿಸುವ ಪ್ರಯತ್ನ ನಡೆದಿದೆ ಎಂದು ಹಲವಾರು ಸದಸ್ಯರು ಆರೋಪಿಸಿದ್ದರು.
ಮಸೂದೆಯನ್ನು ಕಾನೂನಾಗಿ ಅಂಗೀಕರಿಸಿದಾಗ ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಬಳಸಲಾಗುತ್ತದೆ ಎಂಬುದು ಪ್ರತಿಪಕ್ಷಗಳ ನಾಯಕರ ಆತಂಕವಾಗಿದೆ.
