Wednesday, December 31, 2025
Homeರಾಜ್ಯಕೋಗಿಲು ಬಡಾವಣೆಗೆ ಬಿಜೆಪಿ ನಾಯಕರ ಭೇಟಿ, ಎನ್‌ಐಎ ತನಿಖೆಗೆ ಅಶೋಕ್‌ ಒತ್ತಾಯ

ಕೋಗಿಲು ಬಡಾವಣೆಗೆ ಬಿಜೆಪಿ ನಾಯಕರ ಭೇಟಿ, ಎನ್‌ಐಎ ತನಿಖೆಗೆ ಅಶೋಕ್‌ ಒತ್ತಾಯ

BJP leaders visit Kogilu layout, Ashok demands NIA investigation

ಬೆಂಗಳೂರು,ಡಿ.31- ನಗರದ ಯಲಹಂಕ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಸಂಬಂಧ ನಿರಾಶ್ರಿತರಿಗೆ ನೀಡಲಾಗಿರುವ ದಾಖಲೆಗಳ ಕುರಿತು ರಾಷ್ಟ್ರೀಯ ತನಿಖಾ ದಳ(ಎನ್‌ಎಐ)ದಿಂದ ತನಿಖೆ ನಡೆಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ವಿವಾದಿತ ಕೋಗಿಲು ಪ್ರದೇಶಕ್ಕೆ ವಿಧಾನಪರಿಷತ್‌ನ ಪ್ರತಿಪಕ್ಷದ
ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿದಂತೆ ಮತ್ತಿತರ ನಿಯೋಗ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ನಿವಾಸಿಗಳು ಕೇವಲ 6 ತಿಂಗಳ ಹಿಂದೆ ಬಂದಿದ್ದಾರೆಂಬ ಮಾಹಿತಿ ಇದೆ. ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪಡಿತರಚೀಟಿ ಸೇರಿದಂತೆ ಇತರ ದಾಖಲೆಗಳನ್ನು ನೀಡಿದವರು ಯಾರು? ಸತ್ಯಸತ್ಯತೆ ಹೊರಬರಲು ಎನ್‌ಐಎ ತನಿಖೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮುಖ್ಯಮಂತ್ರಿ ಸೂಚನೆ ಮೇರೆಗೆ ಅಧಿಕಾರಿಗಳು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಂತಿಮ ವರದಿ ಬರುವವರೆಗೂ ಯಾವುದೇ ಕಾರಣಕ್ಕೂ ಮನೆ ಹಂಚಿಕೆಯಾಗಲಿ ಇಲ್ಲವೇ ನಿವೇಶನ ಕೊಡುವುದನ್ನು ಮಾಡಬಾರದು. ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಲಹೆ ಮಾಡಿದರು.

ಅಧಿಕಾರಿಗಳು ಈ ವಿಚಾರದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಇಂದು ಅಧಿಕಾರದಲ್ಲಿದ್ದ ಪಕ್ಷ ನಾಳೆ ಇರುವುದಿಲ್ಲ. ಪ್ರತಿಪಕ್ಷದಲ್ಲಿದ್ದವರು ಅಧಿಕಾರಕ್ಕೆ ಬರುತ್ತಾರೆ. ಆದರೆ ಅಧಿಕಾರಿಗಳು ಬದಲಾಗುವುದಿಲ್ಲ ಎಂಬುದನ್ನು ಮರೆಯಬಾರದು. ಆತುರಾತುರವಾಗಿ ಇವರಿಗೆ ಮನೆ ಇಲ್ಲವೇ ಪುನರ್ವಸತಿ ಕಲ್ಪಿಸಲು ಮುಂದಾದರೆ ಮುಂದಾಗುವ ಸಮಸ್ಯೆಗಳಿಗೆ ನೀವೇ ಜವಾಬ್ದಾರರು ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಟೋಪಿ ಹಾಕಿ ಬಾಂಗ್ಲಾದವರಿಗೆ ಈ ಸರ್ಕಾರ ಮನ್ನಣೆ ಹಾಕಿದೆ. ಆಂಧ್ರದಿಂದ ಬಂದವರು ಇಲ್ಲಿದ್ದಾರೆ. ಕೆಲವರು ಕೇರಳ ಅಂತಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ನಾವು ಬರುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ಬೆಂಗಳೂರಿನ ಅಕ್ಕಪಕ್ಕದ ಟ್ಯಾನಿ ರೋಡ್‌ ,ಟಿಪ್ಪೂ ನಗರ ಜನರನ್ನು ಇಲ್ಲಿ ತಂದು ಬಿಟ್ಟಿದ್ದಾರೆ.

ವಸೀಂ, ಸರ್ಫರಾಜ್‌ ಖಾನ್‌ ಸೇರಿ ಹಲವರು ಇವರನ್ನ ತಂದು ಇಲ್ಲಿ ಬಿಟ್ಟಿದ್ದಾರೆ. ಈ 150 ರಸಂತೆಯಲ್ಲಿ 400 ಜನರನ್ನ ತಂದು ಬಿಟ್ಟಿದ್ದಾರೆ. ಇವರು ಎಲ್ಲಿನವರು ಎಂಬುದು ದಾಖಲೆ ತೋರಿಸುತ್ತಿಲ್ಲ. ನಮಗೆ ಈ ಬಗ್ಗೆ ಮಾಹಿತಿ ಇದೆ. ಗೂಗಲ್‌ ಮ್ಯಾಪ್‌ನಲ್ಲಿ ವರ್ಷದ ಹಿಂದಿದ್ದ ಜಾಗ ಈಗ ಮನೆಗಳಾಗಿ ಬದಲಾಗಿವೆ. ಇದು ಹೇಗೆ ಸಾದ್ಯ. ಇಂತಹ ಜಾಗಕ್ಕೆ ಕರೆಂಟ್‌ ಹೇಗೆ ಕೊಟ್ಟಿದ್ದಾರೆ? ಇವರು ಯಾರು ನೆಂಟರು? ಸಿದ್ದರಾಮಯ್ಯ ನೆಂಟರಾ? ಎಂದು ಪ್ರಶ್ನಿಸಿದರು.

ಕೋಗಿಲು ಲೇಔಟ್‌ ಅನ್ನು ಮಿನಿ ಬಾಂಗ್ಲಾದೇಶ ಮಾಡಲು ಹೊರಟಿದ್ದಾರೆ. ಡ್ರಗ್‌್ಸ ಸಮಸ್ಯೆ ಎದುರಾಗಿದೆ. ಪೊಲೀಸರೂ ಇದರ ಭಾಗ ಆಗುತ್ತಿದೆ. ಬೆಂಗಳೂರಿನ ಒಂದೊಂದು ಕಡೆ ಉಡ್ತಾ ಬಾಂಗ್ಲಾ ಅಗುತ್ತಿದೆ. ಇವರಿಗೆ ಕೆಲಸ ಎಲ್ಲಿಂದ ಸಿಗತ್ತದೆ. ಕೆಲಸ ಕೊಡೋರು ಯಾರು? ಇದಕ್ಕೆ ಹೊಣೆ ಯಾರು? ಎಂದು ಮರು ಪ್ರಶ್ನೆ ಮಾಡಿದರು.

ಬರ್ಥ್‌ ಸರ್ಟಿಫಿಕೇಟ್‌ ಇಲ್ಲದೆಯೇ ಇವರಿಗೆ ಮನೆ ಕೊಡಲು ಹೊರಟಿದ್ದಾರೆ. ರೇಷನ್‌ ಕಾರ್ಡ್‌ ಆಧಾರ್‌ ಕಾರ್ಡ್‌ ಎಲ್ಲಿನದ್ದು? ಯಾರು ಕೊಟ್ಟರು? 600 ಕೋಟಿ ಬೆಲೆಯ ಈ ಭೂಮಿಯನ್ನ ಸಿದ್ದರಾಮಯ್ಯ ಮತ್ತವರ ಪಕ್ಷ ಹೇಗೆ ಇವರಿಗೆ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ. ರಾಹುಲ್‌ ಗಾಂಧಿ ಟ್ವೀಟ್‌, ಕೇರಳದ ಒತ್ತಡಕ್ಕೆ ಸರ್ಕಾರ ತಲೆ ಬಾಗಿದೆ. ಪಾಕಿಸ್ತಾನದ ಫಾರಿನ್‌ ಅಫೇರ್‌ ಮಿನಿಸ್ಟರ್‌ ಈ ಬಗ್ಗೆ ಮಾತನಾಡುತ್ತಾರೆ ಎಂದರೆ ಹೇಗೆ ಸಾಧ್ಯ? ಇಲ್ಲಿರೋ ಸ್ಲೀಪರ್‌ ಸೆಲ್‌, ಟೆರೆರೆಸ್ಟ್‌ ಇದರ ಬಗ್ಗೆ ಅವರಿಗೆ ಮಾಹಿತಿ ಕೊಟ್ಟಿದ್ದಾರೆ ಎಂದು ದೂರಿದರು.

ಕೇರಳ ಚುನಾವಣೆಗೆ ಇಲ್ಲಿಂದ ರಾಜಕೀಯ ಮಾಡ ಹೊರಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಮುನ್ನಡೆಸುವ ನೈತಿಕತೆ ಏನು? ನಮ ಸರ್ಕಾರವನ್ನ ಬುಲ್ಡೋಜರ್‌ ಸರ್ಕಾರ ಎಂದು ಕೇರಳಿಗರು ಹೇಳದ ಮೇಲೂ ಅವರು ಹೇಳಿದಂತೆ ನಡೆಯುತ್ತಿದ್ದೀರಾ? ಎಂದರೆ ಏನರ್ಥ ಎಂದು ಸರ್ಕಾರದ ವಿರುದ್ಧ ಅಶೋಕ್‌ ಕಿಡಿಕಾರಿದರು.

ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೋಗಿಲು ಲೇಔಟ್‌ ನಲ್ಲಿ ಅಕ್ರಮ ಮನೆಗಳ ನೆಲ ಸಮ ಮಾಡಿ ಸರ್ಕಾರ ತಪ್ಪು ಮಾಡುತಾ? ಸರಿ ಮಾಡುತ್ತಾ? ಮೊದಲು ಹೌದು ಎಂದ ಸರ್ಕಾರ ಈಗ ಪಾಕಿಸ್ತಾನ, ಕೇರಳ ಹಾಗೂ ವೇಣು ಗೋಪಾಲ್‌ ಟ್ವೀಟ್‌ ಬಳಿಕ ಸರ್ಕಾರ ವಿರುದ್ಧ ವಾಗಿ ನಡೆದುಕೊಂಡಿದೆ ಎಂದರು.

ಬಾಂಗ್ಲಾದ ರೋಹಿಂಗ್ಯಾ ಹಾಗೂ ಬೇರೆ ರಾಷ್ಟ್ರದವರು ಇಲ್ಲಿದ್ದರು. ನಾವು ಬರುವ ಹೊತ್ತಿಗೆ ಅವರನ್ನು ಸ್ಥಳಾಂತರ ಮಾಡಿದ್ದಾರೆ. ರಾಜ್ಯದ ಸಚಿವರು ಇದರ ಹಿಂದಿದ್ದಾರೆ. ಅವರ ಸಿಹಿ ಸುದ್ದಿಯ ಹೇಳಿಕೆ ಅರ್ಥ ಇದೇ ಇರಬಹುದು. ಹೀಗಾಗಿ ಇದರ ಬಗ್ಗೆ ಎನ್‌ಐಎ ತನಿಖೆ ಆಗಬೇಕು. ಪರಿಶೀಲನೆ ಆಗುವರೆಗೂ ಇಲ್ಲಿನವರಿಗೆ ಮನೆ ಕೊಡಬಾರದು ಎಂದರು. ಮೊದಲು ರಾಜ್ಯದಲ್ಲಿ ಮನೆ ಹಾಕಿಕೊಂಡಿರುವ ದಲಿತರು ಹಾಗೂ ಬಡವರಿಗೆ ಮೊದಲು ಅವಕಾಶ ಕೊಡಿ. ಇಲ್ಲದಿದ್ದರೆ ನಾವೇ ಅಲ್ಲಿಗೆ ಅವರನ್ನ ನುಗ್ಗಿಸಬೇಕಾಗುತ್ತದೆ. ಮೊದಲು ನಮಗೆ ಅವಕಾಶ ಕೊಡಿ ಎಂದು ಛಲವಾದಿ ಆಗ್ರಹಿಸಿದರು.

RELATED ARTICLES

Latest News