ಬೆಳಗಾವಿ,ಡಿ.18- ತನ್ನ ಆಂತರಿಕ ಕಚ್ಚಾಟದಿಂದಲೇ ಪ್ರತಿ ಅಧಿವೇಶನದಲ್ಲೂ ಆಡಳಿತ ಪಕ್ಷದ ಮುಂದೆ ಬೆತ್ತಲಾಗುತ್ತಿದ್ದ ವಿರೋಧಪಕ್ಷ ಬಿಜೆಪಿ ಇದೇ ಮೊದಲ ಬಾರಿಗೆ ಒಗ್ಗಟ್ಟು ಪ್ರದರ್ಶಿಸಿದ ಪರಿಣಾಮ ಸರ್ಕಾರದ ಕಿವಿಹಿಂಡುವಲ್ಲಿ ಯಶಸ್ವಿಯಾಗಿದೆ.
ಮನೆಯೆಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿಯಲ್ಲಿ ಅಪರೂಪಕ್ಕೆ ಎಂಬಂತೆ ಎರಡು ಸದನಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿ ಸಚಿವರೊಬ್ಬರನ್ನು ಸದನದಲ್ಲೇ ಕ್ಷಮೆ ಕೇಳುವಂತೆ ಮಾಡಿದ್ದು ಇತ್ತೀಚಿನ ವರ್ಷಗಳಲ್ಲೇ ಅಪರೂಪದ ಪ್ರಕರಣವಾಗಿದೆ.
ಪ್ರತಿಬಾರಿ ಅಧಿವೇಶನ ಆರಂಭದ ಮುನ್ನವೇ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬೇಕಾದ ಸಿದ್ಧತೆಗಳನ್ನು ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಒಂದಿಷ್ಟು ಸಿದ್ಧತೆಗಳನ್ನು ನಡೆಸುತ್ತಿತ್ತು. ಆದರೆ ಸರ್ಕಾರದ ವಿರುದ್ಧ ಹೋರಾಟದಲ್ಲಿ ಅನೇಕ ಬಾರಿ ಎಡವಿ ತಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುತ್ತಿದ್ದರು.
ಏಕೆಂದರೆ ಸದನದಲ್ಲಿ ಅಶೋಕ್ ಬಣ ಒಂದು ಕಡೆಯಾದರೆ, ಇನ್ನೊಂದು ಕಡೆ ಬಿ.ವೈ.ವಿಜೇಂದ್ರ ಬಣ ಇರುತ್ತಿತ್ತು. ಇವರೆಡು ಬಣಗಳ ಜೊತೆ ಗುರುತಿಸಿಕೊಳ್ಳದೆ ತಟಸ್ಥ ಬಣ ಅವಕಾಶ ಇದ್ದ ಕಡೆ ಜೈ ಎನ್ನುತ್ತಿತ್ತು. ಆದರೆ ಮೊದಲ ಬಾರಿಗೆ ಇವೆಲ್ಲವನ್ನೂ ಬದಿಗೊತ್ತಿ ಬಿಜೆಪಿ ಸಂಘಟಿತ ಹೋರಾಟ ನಡೆಸಿದ ಪರಿಣಾಮ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮೊಟ್ಟಮೊದಲ ಬಾರಿಗೆ ತನ್ನೆಲ್ಲಾ ವಿರೋಧಭಾಸಗಳನ್ನು ಮರೆತು ಮೊದಲ ಬಾರಿಗೆ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಸಚಿವರನ್ನು ಕ್ಷಮೆ ಕೇಳುವಂತೆ ಮಾಡಿರುವುದು ಸಣ್ಣ ಮಾತಲ್ಲ.
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡದೆ ಅದನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಮಾಡಿದ ಮೊದಲ ತಪ್ಪು. ಶಾಸಕರು ಕೇಳಿದ ಪ್ರಶ್ನೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮತ್ತೊಮೆ ಉತ್ತರ ಕೊಡುತ್ತೇನೆ ಎಂದಿದ್ದರೆ ಕನಿಷ್ಠಪಕ್ಷ ಸರಕಾರ ಮುಜುಗರದಿಂದ ತಪ್ಪಿಸಿಕೊಳ್ಳಬಹುದಿತ್ತು.
ಆದರೆ ತಾನು ಸರಿಯಾದ ಮಾಹಿತಿಯನ್ನೇ ಕೊಟ್ಟಿದ್ದೇನೆಂದು ಹೆಬ್ಬಾಳ್ಕರ್ ವಾದ ಮಾಡಿದ್ದು ಪ್ರತಿಪಕ್ಷಗಳಿಗೆ ಕೈಗೆ ಸಿಕ್ಕ ದೊಡ್ಡ ಅಸ್ತ್ರವಾಯಿತು. ತಕ್ಷಣವೇ ಧಾರವಾಡ, ಗದಗ,ಬೆಳಗಾವಿ ಸೇರಿದಂತೆ ಮತ್ತಿತರ ಕಡೆ ಆಯಾ ಜಿಲ್ಲೆಗಳಲ್ಲಿ ಭಾಗ್ಯಲಕ್ಷಿ ಯೋಜನೆಯಡಿ ಫಲಾನುಭವಿಗೆ ಯಾವ ಯಾವ ತಿಂಗಳಲ್ಲಿ ಹಣ ಜಮಯಾಗಿದೆ ಎಂಬುದನ್ನು ದಾಖಲೆಗಳ ಸಮೇತ ಸಂಗ್ರಹಣೆ ಮಾಡಲಾಯಿತು. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಗೃಹಲಕ್ಷಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಸಂದಾಯವಾಗದಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿತ್ತು.
ಈ ಎರಡು ತಿಂಗಳಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ಒಪ್ಪಿಕೊಂಡಿದ್ದರೆ ವಿವಾದ ಸುಖಾಂತ್ಯವಾಗುತ್ತಿತ್ತು. ಆದರೆ ಹೆಬ್ಬಾಳ್ಕರ್ ಜಿದ್ದಿಗೆ ಬಿದ್ದವರಂತೆ ನಾನು ಕೊಟ್ಟ ಮಾಹಿತಿ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಅಂತಿಮವಾಗಿ ಬಿಜೆಪಿ ಶಾಸಕರು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಹಣ ಬಾಕಿ ಇರುವುದನ್ನು ಸದನದಲ್ಲಿ ದಾಖಲೆಗಳ ಸಮೇತ ಇಟ್ಟು ಸರ್ಕಾರವನ್ನು ಮತ್ತಷ್ಟು ಮುಜುಗರಕ್ಕೆ ಸಿಲುಕಿಸಿದರು.
ಗೃಹಲಕ್ಷಿ ಯೋಜನೆ ಕುರಿತು ಸಚಿವೆ ಲಕ್ಷಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20 ಕೋಟಿ ಫಲಾನುಭವಿ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಈ ಯೋಜನೆ 1.20 ಕೋಟಿ ಜನರಿಗೆ ಸಂಬಂಧಿಸಿದೆ. ಜನವರಿ, ಫೆಬ್ರವರಿ ತಿಂಗಳ ಸಹಾಯಧನ ನೀಡದೆ ಮೇ, ಜೂನ್, ಜುಲೈ ತಿಂಗಳ ಸಹಾಯಧನ ನೀಡಲು ಹೇಗೆ ಸಾಧ್ಯ? ಈ ತಿಂಗಳ ಸಹಾಯಧನ ನೀಡದೆ ಮುಂದಕ್ಕೆ ಹೋಗಲಾಗಿದೆ ಎಂದರೆ ಜನರಿಗೆ ಮೋಸ ಮಾಡಿದ್ದಾರೆ ಅಥವಾ ಖಜಾನೆ ಖಾಲಿಯಾಗಿದೆ ಎಂದೇ ಅರ್ಥ ಎಂದು ವಾದಿಸಿದರು.
ಕೋಟ್ಯಂತರ ಮಹಿಳೆಯರು ಇದೇ ಹಣ ನಂಬಿರುತ್ತಾರೆ. ಮನೆಗೆ ದಿನಸಿ, ಸಾಲ ಮರುಪಾವತಿಗೆ ಈ ಹಣ ಅವಲಂಬಿಸಿರುತ್ತಾರೆ. ಪ್ರತಿ ತಿಂಗಳು 2,480 ಕೋಟಿ ರೂ. ನೀಡಬೇಕು. ಅಂದರೆ ಎರಡು ತಿಂಗಳು 5,000 ಕೋಟಿ ರೂ. ನೀಡಬೇಕು. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎರಡು ತಿಂಗಳು ಬಿಟ್ಟು ನೇರವಾಗಿ ಮುಂದಕ್ಕೆ ಹೋಗಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಶ್ನೆ ಮಾಡಿದ ಅವರು, ತಪ್ಪು ಮಾಹಿತಿ ನೀಡಿದ್ದಕ್ಕೆ ಸಚಿವರು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇತ್ತ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಪ್ರಿಯಾಂಕಾ ಖರ್ಗೆ, ಡಾ.ಶರಣ್ ಪ್ರಕಾಶ್ ಪಾಟೀಲ್, ಚೆಲುವರಾಯಸ್ವಾಮಿ ಸೇರಿದಂತೆ ಅನೇಕರು ಬೆಂಬಲಕ್ಕೆ ನಿಂತರು.
ಸರ್ಕಾರವನ್ನು ಇಕ್ಕಟ್ಟಿನಿಂದ ಪಾರು ಮಾಡಲು ಸ್ವತಃ ಸಭಾಧ್ಯಕ್ಷ ಯು.ಟಿ.ಖಾದರ್ ಹಲವು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಸಚಿವೆ ಹೇಳಿದರೂ ಪಟ್ಟು ಬಿಡದ ಬಿಜೆಪಿ ಕ್ಷಮೆಯಾಚನೆಗೆ ಒತ್ತಾಯಿಸಿತು. ಕೊನೆಗೆ ವಿಧಿ ಇಲ್ಲದೆ ಲಕ್ಷ್ಮಿ ಹೆಬಾಳ್ಕರ್ ಸದನದಲ್ಲಿ ಕ್ಷಮೆ ಕೇಳಿ ತಪ್ಪಾಗಿರುವುದನ್ನು ಒಪ್ಪಿಕೊಂಡರು.
ಸರ್ಕಾರ ವಿರುದ್ಧ ಸಂಘಟಿತವಾಗಿ ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಸಂಘಟಿತ ಹೋರಾಟ ನಡೆಸಬೇಕೆಂದು ಬಿಜೆಪಿ ರಾಷ್ಟ್ರೀಯ ನಾಯಕರು ಕಟ್ಟಪ್ಪಣೆ ವಿಧಿಸಿದ್ದರ ಪರಿಣಾಮವೇ ಸಚಿವರೊಬ್ಬರು ಕ್ಷಮೆ ಕೇಳುವಂತಾಯಿತು.
