ಬೆಂಗಳೂರು,ಜ.24- ಸರಕಾರಿ ಶಾಲೆಗಳಲ್ಲಿ ಓದಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಬದಲಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಸಂದಾಯ ಮಾಡುವಂತೆ ಶಾಲಾ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.
ಈ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್-3 ವಿದ್ಯಾರ್ಥಿಗಳ ಆಧಾರ್ ಲಿಂಕ್‌್ಡ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ನಗದು ಬಹುಮಾನವು ಪ್ರತಿ ವಿದ್ಯಾರ್ಥಿಗೆ 50,000 ರೂ. ಆಗಿರಲಿದೆ. 2024-25ನೇ ಶೈಕ್ಷಣಿಕ ವರ್ಷದಲ್ಲಿ 758 ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ.
ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮದಡಿ ಅತಿಹೆಚ್ಚು ಅಂಕ ಪಡೆದ ಪ್ರತಿ ತಾಲ್ಲೂಕಿನ ಮೂವರು ವಿದ್ಯಾರ್ಥಿಗಳು ಹಾಗೂ ಪ್ರತಿ ಜಿಲ್ಲೆಯಲ್ಲಿಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಕಳೆದ ವರ್ಷ ಸರಕಾರ ಅನುಮೋದನೆ ನೀಡಿತ್ತು. ಈಗ ವಿದ್ಯಾರ್ಥಿಗಳಿಗೆ ನೀಡಲು ಮೀಸಲಿಡಲಾಗಿದ್ದ 3.25 ಕೋಟಿ ರೂ.ಗಳನ್ನು ಒಟ್ಟು 758 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ನಂತೆ ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ(ಯೋಜನೆ) ಶುಭಮಂಗಳಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್(ಎಸ್‌ಎಸ್‌ಪಿ) ಮೂಲಕ ವಿದ್ಯಾರ್ಥಿಗಳ ಆಧಾರ್‌ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣವನ್ನು ಡಿಬಿಟಿ ಮೂಲಕ ವಿತರಿಸುವಂತೆ ಸೂಚಿಸಲಾಗಿದ್ದು, ಕೊರತೆಯಾಗುವ ಅನುದಾನವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸ್ವಂತ ಮೂಲಗಳಿಂದ ಭರಿಸುವಂತೆಯೂ ನಿರ್ದೇಶಿಸಲಾಗಿದೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಬದಲು ಹಣ ಸಂದಾಯ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2025ರ ನ.14ರ ಮಕ್ಕಳ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು 33ಕ್ಕೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 30ಕ್ಕೆ ನಿಗದಿಪಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ ಮಾಡಿದ್ದಾರೆ. ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ 20 ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಲಿಖಿತ ಪರೀಕ್ಷೆಯಲ್ಲಿ ಕೇವಲ ಶೇ.13ರಷ್ಟು ಅಂಕ ಗಳಿಸಿದರೂ ಉತ್ತೀರ್ಣರಾಗಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಹೊಸ ಬದಲಾವಣೆಗಳನ್ನು ಪ್ರಕಟಿಸಲಾಗಿದ್ದು,ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಮಹತ್ತರ ಪರಿಣಾಮ ಬೀರಲಿದೆ.
ಮೇ ತಿಂಗಳ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದ್ದು, ಮುಂದಿನ ಹಂತದ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿದೆ. ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ, ಡಿಪ್ಲೊಮೋ ಅಥವಾ ಐಟಿಐ ಸೇರಲು ಬಯಸುವವರಿಗೆ ಲಭ್ಯವಿರುವ ವಿವಿಧ ವಿಷಯ ಸಂಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಆಯ್ಕೆಗಳು ವಿದ್ಯಾರ್ಥಿಗಳು ತಮ ಆಸಕ್ತಿಗೆ ಅನುಗುಣವಾಗಿ ಭವಿಷ್ಯದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ನೆರವಾಗಲಿವೆ. ಸರಿಯಾದ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ನಿರ್ಧಾರ ಕೈಗೊಳ್ಳಬಹುದು.
ತಮಗೆ ದೊರೆತ ಬಹುಮಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲ್ಯಾಪ್‌ಟಾಪ್ ನೀಡುವ ಬದಲು ನಗದು ಬಹುಮಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಪ್ರಯೋಜನ ದೊರಕಲಿದೆ ಎಂದು ಶಾಲಾ ಹಾಗೂ ಶಿಕ್ಷಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
