ಬೆಂಗಳೂರು,ಡಿ.13-ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು 2026ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (Mnimum Support Price) ಹೆಚ್ಚಿಸಲು ಅನುಮೋದನೆ ನೀಡಿದ್ದು, ರಾಜ್ಯದ ರೈತರಿಗೆ ಮತ್ತೊಮೆ ಸಿಹಿ ಸುದ್ದಿ ನೀಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ತೆಂಗು ಬೆಳೆಗಾರರಿಗೆ ಮೋದಿ ಸರ್ಕಾರವು ಹೊಸವರ್ಷದ ಕೊಡುಗೆಯಾಗಿ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದೆ ಎಂದು ಹೇಳಿದ್ದಾರೆ.
ಕೇಂದ್ರದ ಈ ನಿರ್ಧಾರದಿಂದಾಗಿ ರಾಜ್ಯದ ತೆಂಗು ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯಲಿದ್ದು, ಹೋಳು ಕೊಬ್ಬರಿ ಮತ್ತು ಉಂಡೆ ಕೊಬ್ಬರಿ ಎರಡರ ದರದಲ್ಲೂ ಗಮನಾರ್ಹ ಏರಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೋಳು ಕೊಬ್ಬರಿಗೆ 445 ರೂ., ಉಂಡೆ ಕೊಬ್ಬರಿಗೆ 400 ರೂ. ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೋಳು ಕೊಬ್ಬರಿ ಕ್ವಿಂಟಾಲ್‌ಗೆ 2025ರಲ್ಲಿ 11,582 ರೂ. ಇದ್ದ ದರವು 2026ಕ್ಕೆ 12,027 ರೂ.ಗೆ ಏರಿಕೆಯಾಗಲಿದೆ. ಒಟ್ಟು 445 ರೂ. ಹೆಚ್ಚಳವಾಗಿದೆ ಎಂದು ಹೇಳಿರುವ ಅವರು, ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ ಪ್ರಸ್ತುತ 12,100 ರೂ. ಇದ್ದು 2026ಕ್ಕೆ 12,500 ರೂ. ಏರಿಕೆಯಾಗಲಿದ್ದು, ಒಟ್ಟು 400 ರೂ. ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
2014ರಿಂದ ಕೇಂದ್ರ ಸರ್ಕಾರವು ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿಯನ್ನು ಗಣನೀಯವಾಗಿ ಹೆಚ್ಚಿಸುತ್ತಾ ಬಂದಿದ್ದು, 2014ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ 5,250 ರೂ. ಇತ್ತು. ಕಳೆದ 10 ವರ್ಷಗಳಲ್ಲಿ ಶೇ.129ರಷ್ಟು ಜಾಸ್ತಿ ಆಗಿದೆ. ಅದೇ ರೀತಿ ಉಂಡೆ ಕೊಬ್ಬರಿಯ ಬೆಲೆಯು ಕ್ವಿಂಟಲ್‌ಗೆ 5,500 ರೂ.ನಿಂದ 12,500 ರೂ.ಗೆ ಏರಿಕೆಯಾಗಿದ್ದು, ಶೇ.127 ರಷ್ಟು ಹೆಚ್ಚಳವಾಗಿದೆ ಎಂದು ಅವರು ವಿವರಿಸಿದ್ದಾರೆ.
