ಬೆಂಗಳೂರು, ಡಿ.13- ಕರ್ನಾಟಕದ 2023 ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಮಗ ಮತ್ತು ಅವರ ಆಪ್ತ ಸಹಾಯಕ ಸೇರಿದಂತೆ ಏಳು ಜನರನ್ನು ಹೆಸರಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಬೆಂಗಳೂರಿನ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ವಿಶೇಷ ತನಿಖಾ ತಂಡ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ 5,994 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸಿಐಡಿ ಮೂಲಗಳ ಪ್ರಕಾರ, ಚಾರ್ಜ್‌ಶೀಟ್ 22 ಸಾವಿರಕ್ಕೂ ಹೆಚ್ಚು ಪುಟಗಳನ್ನು ಹೊಂದಿದ್ದು, ಮತದಾರರ ಹೆಸರುಗಳನ್ನು ಅಳಿಸಲು ಅಳವಡಿಸಿಕೊಂಡ ವಿಧಾನವನ್ನು ವಿವರವಾಗಿ ವಿವರಿಸುತ್ತದೆ.
ಆರೋಪ ಪಟ್ಟಿಯಲ್ಲಿ ಹೆಸರಿಸಲಾದವರು ಆಳಂದದ ನಾಲ್ಕು ಬಾರಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ಅವರ ಮಗ ಹರ್ಷಾನಂದ ಗುತ್ತೇದಾರ್,ಅವರ ಆಪ್ತ ಕಾರ್ಯದರ್ಶಿ ತಿಪ್ಪೇರುದ್ರ, ಕಲಬುರಗಿ ಮೂಲದ ಮೂವರು ಡೇಟಾ ಸೆಂಟರ್ ನಿರ್ವಾಹಕರಾದ ಅಕ್ರಮ್ ಪಾಷಾ, ಮುಕರಾಮ್ ಪಾಷಾ ಮತ್ತು ಮೊಹಮದ್ ಅಶ್ಫಾಕ್ ಮತ್ತು ಪಶ್ಚಿಮ ಬಂಗಾಳದ ಬಾಪಿ ಆದ್ಯಾ ಇದ್ದಾರೆ.
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ಆದ್ಯಾ. ಅವರು ಒಟಿಪಿ ಬೈಪಾಸ್ ಸೌಲಭ್ಯವನ್ನು ಒದಗಿಸಲು ಅಮೆರಿಕ ಮೂಲದ ವೇದಿಕೆಯೊಂದಿಗೆ ಸಂಪರ್ಕ ಹೊಂದಿದ್ದ ಒಟಿಪಿ ಬಜಾರ್ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ನಂತರ ಅವರು ಜಾಮೀನು ಪಡೆದಿದ್ದರೆ ಈಗಾಗಲೇ ವಿಶೇಷ ನ್ಯಾಯಾಲಯವು ಈ ಹಿಂದೆ ಗುತ್ತೇದಾರ್ ಅವರ ಮಗ ಮತ್ತು ತಿಪ್ಪೇರುದ್ರ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಚಾರ್ಜ್‌ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಷಾನಂದ ಅವರು, ತಮ ವಿರುದ್ಧದ ಆರೋಪಗಳನ್ನು ಪಿತೂರಿ ಎಂದು ಟೀಕಿಸಿದ್ದಾರೆ. ರಾಜಕೀಯ ದ್ವೇಷದಿಂದ ನನ್ನ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದರು.
