ಬೆಂಗಳೂರು, ಜ.4- ಪ್ರಕೃತಿ ವಿಷಯ ವನ್ನಾಧರಿಸಿ ಚಿತ್ರಕಲಾ ಪರಿಷತ್‌ನಲ್ಲಿ ಹಮಿಕೊಂಡಿದ್ದ 23ನೆ ಚಿತ್ರಸಂತೆಗೆ ಇಂದು ಚಿತ್ರಪ್ರೇಮಿಗಳ ದಂಡೇ ಹರಿದು ಬಂದಿತ್ತು.ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 23ನೆ ಚಿತ್ರಸಂತೆಗೆ ಫೋಟೋ ಕ್ಯಾನ್ವಾಸ್ ಮೇಲೆ ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಖ್ಯಾತ ಕೈಗಾರಿಕೋದ್ಯಮಿ ಎಸ್.ಎನ್. ಅಗರ್ವಾಲ್, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಿಸರ್ಗ, ವ್ಯಕ್ತಿ ಚಿತ್ರ, ವ್ಯಂಗ್ಯ ಚಿತ್ರ, ಪ್ರಾಣಿ-ಪಕ್ಷಿ, ಮರ-ಗಿಡ ಸೇರಿದಂತೆ ವೈವಿಧ್ಯಮಯವಾದ ಕಲಾಕೃತಿಗಳು ಪ್ರೇಕ್ಷಕರ ಮನಸೂರೆಗೊಂಡಿದ್ದವು. ಒಂದಕ್ಕಿಂತಲೂ ಮತ್ತೊಂದು ಭಿನ್ನವಾಗಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು.
ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ಚಿತ್ರಸಂತೆಗೆ ಕಲಾಸಕ್ತರು ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಆಗಮಿಸಿದ್ದರು. ಜೇನುಗೂಡಿನ ವಿನ್ಯಾಸದ ಪ್ರವೇಶದ್ವಾರವು ಚಿತ್ರಸಂತೆಯ ವಿಶೇಷ ಆಕರ್ಷಣೆಯಾಗಿತ್ತು. ಈ ಬಾರಿ 22 ರಾಜ್ಯ ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 1500ಕ್ಕೂ ಹೆಚ್ಚು ಕಲಾವಿದರು ತಮ ಕೈ ಚಳಕದಲ್ಲಿ ಮೂಡಿಬಂದ ಚಿತ್ರಕಲೆಗಳನ್ನು ಪ್ರದರ್ಶಿಸಿದರು.
ಕಲಾಸಕ್ತರು ಮುಗಿಬಿದ್ದು ಕಲಾಕೃತಿಗಳ ವೀಕ್ಷಣೆ ಮಾಡಿದರಲ್ಲದೆ ತಮಗೆ ಮೆಚ್ಚುಗೆಯಾದ ಕಲಾಕೃತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಚಿತ್ರಕಲಾ ಪರಿಷತ್ ಆವರಣವಲ್ಲದೆ ಮುಂಭಾಗದ ರಸ್ತೆಗಳಲ್ಲಿಯೂ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇಶ-ವಿದೇಶಗಳ ಹಿರಿ-ಕಿರಿ ಕಲಾವಿದರು ತಮ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾಸಕ್ತರ ಕುತೂಹಲ ಹೆಚ್ಚಿಸಿದರು.
ಪರಿಷತ್‌ನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ್ದ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ, ಚಿತ್ರಸಂತೆಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ, ಕುಂಚ ಅಥವಾ ಪೆನ್ಸಿಲ್‌ಗಳಿಂದ ಸ್ಥಳದಲ್ಲಿಯೇ ಕಲಾರಸಿಕರ ಭಾವಚಿತ್ರ ರಚಿಸಿಕೊಡುವ ಕಲಾವಿದರು ಹೆಚ್ಚು ಆಕರ್ಷಿತರಾಗಿದ್ದರು.
ಚಿತ್ರಸಂತೆಯಲ್ಲಿ 100ರೂ. ನಿಂದ ಲಕ್ಷಾಂತರ ರೂ. ಮೌಲ್ಯದವರೆಗಿನ ಕಲಾಕೃತಿಗಳು ಪ್ರದರ್ಶಿತವಾಗಿದ್ದವು. ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿರುವ ಚಿತ್ರಸಂತೆಯು ರಾತ್ರಿ 8 ಗಂಟೆವರೆಗೂ ನಡೆಯಲಿದೆ. ಚಿತ್ರಸಂತೆಗೆ ಬಂದುಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಕೆಂಪೇಗೌಡ ಬಸ್ ನಿಲ್ದಾಣ, ಮಂತ್ರಿ ಮಾಲ್, ವಿಧಾನಸೌಧದ ಮೆಟ್ರೋ ನಿಲ್ದಾಣದಿಂದ ಶಿವಾನಂದ ವೃತ್ತದವರೆಗೆ ಪ್ರತಿ 10 ನಿಮಿಷಕ್ಕೊಂದು ಬಿಎಂಟಿಸಿ ಫೀಡರ್ ಬಸ್ ಸೇವೆಯನ್ನು ಒದಗಿಸಲಾಗಿತ್ತು.
ಅಲ್ಲದೆ, ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಸೇತುವೆವರೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಣ್ಯರು, ವಿಶೇಷ ಚೇತನರು, ಹಿರಿಯ ನಾಗರಿಕರನ್ನು ಕರೆದೊಯ್ಯಲು ಇವಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಸಂತೆಗೆ ಬರುವ ವಾಹನಗಳನ್ನು ಕ್ರೆಜೆಂಟ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಬಿಡಿಎ ಆವರಣ, ರೈಲ್ವೆ ಸಮಾನಾಂತರ ರಸ್ತೆಗಳಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.
