Sunday, December 21, 2025
Homeರಾಜ್ಯಪ್ರೊ.ಗೋವಿಂದರಾವ್‌ ಸಮಿತಿ ವರದಿ ಬಳಿಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತು ಹೊಸ ಯೋಜನೆಗಳ ಘೋಷಣೆ :...

ಪ್ರೊ.ಗೋವಿಂದರಾವ್‌ ಸಮಿತಿ ವರದಿ ಬಳಿಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತು ಹೊಸ ಯೋಜನೆಗಳ ಘೋಷಣೆ : ಸಿಎಂ

CM announces new schemes for development of backward areas after Prof. Govinda Rao Committee report

ಬೆಂಗಳೂರು, ಡಿ.21- ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತಂತೆ ಪ್ರೊ.ಗೋವಿಂದರಾವ್‌ ಅವರ ಸಮಿತಿ ವರದಿ ನೀಡಿದ ಬಳಿಕ ಅದರ ಅನುಷ್ಠಾನಕ್ಕೆ ಹೊಸ ಘೋಷಣೆಗಳನ್ನು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಪಲ್ಸ್ ಪೋಲೀಯೋ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಂಟು ದಿನಗಳ ಚರ್ಚೆಯಾದರೂ ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಟೀಕಿಸಿದೆ.

ಇದಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ಕಾಂಗ್ರೆಸ್‌‍ ಸರ್ಕಾರ ಯಾವುದೇ ಘೋಷಣೆಗಳನ್ನು ಮಾಡಿಲ್ಲ ಎಂದು ಟೀಕಿಸಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಈಗ ಪ್ರತಿಪಕ್ಷವಾಗಿರುವ ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಯಾವ ಸಾಧನೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

ಹಿಂದುಳಿದ ಪ್ರದೇಶಗಳ ಅಧ್ಯಯನಕ್ಕಾಗಿ ಪ್ರೊಫೆಸರ್‌ ಗೋವಿಂದರಾವ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಅದರ ವರದಿ ಜನವರಿಯಲ್ಲಿ ಸಲ್ಲಿಕೆಯಾಗಲಿದ್ದು ಆ ಬಳಿಕ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸುವುದಾಗಿ ವಿಧಾನ ಮಂಡಲದ ಅಧಿವೇಶನದಲ್ಲಿ ಹೇಳಿದ್ದೇನೆ ಎಂದರು.

ಕಾಂಗ್ರೆಸ್‌‍ ಸರ್ಕಾರಗಳು ನಂಜುಂಡಪ್ಪ ಸಮಿತಿ, ಪ್ರೊಫೆಸರ್‌ ಗೋವಿಂದ್‌ ರಾವ್‌ ಅವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿವೆ. ಕಾಂಗ್ರೆಸ್‌‍ ಆಡಳಿತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 504 ಹಾಸ್ಟೆಲ್‌ ಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿಯವರು ಕೇವಲ ಐದು ಹಾಸ್ಟೆಲ್‌ ಗಳನ್ನು ಮಾತ್ರ ಸ್ಥಾಪಿಸಿದ್ರು. ಇವರಿಗೆ ಕಾಂಗ್ರೆಸ್‌‍ ಅನ್ನು ಟೀಕಿಸುವ ಯಾವ ನೈತಿಕತೆ ಇದೆಯೇ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ 371-ಜೆ ವಿಶೇಷ ಸ್ಥಾನಮಾನ ನೀಡಿದ್ದು ಕಾಂಗ್ರೆಸ್‌‍ ಸರ್ಕಾರ. ಬಿಜೆಪಿ ನೇತೃತ್ವದಲ್ಲಿದ್ದ ಕೇಂದ್ರ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿದ್ದ ಎಲ್‌.ಕೆ.ಅಡ್ವಾಣಿ ಆಗಿನ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ ಅವರ ಸರ್ಕಾರಕ್ಕೆ ಪತ್ರ ಬರೆದು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಹಾರಾಷ್ಟ್ರದ ವಿದರ್ಭಕ್ಕೆ ವಿಶೇಷ ಸ್ಥಾನಮಾನ ನೀಡಿ ಮ್ಯಾಚಿಂಗ್‌ ಗ್ರಾಂಡ್‌ ನೀಡುತ್ತಿದ್ದಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ 371 ಜೆಗೂ ಮ್ಯಾಚಿಂಗ್‌ ಗ್ರಾಂಡ್‌ ಕೊಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ ಎರಡನೇ ಹಂತ ಪೂರ್ಣಗೊಂಡಿಲ್ಲ ಎಂದು ಬಸವರಾಜ ಬೊಮಾಯಿ ಹೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿಯಿದ್ದಾಗ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ಎರಡು ಹಂತದಲ್ಲಿ 524 ಮೀಟರ್‌ ಗೆ ಹೆಚ್ಚಿಸುವುದಾಗಿ ಹೇಳಿದ್ದರು. ಅದು ಈಡೇರಲಿಲ್ಲ.

ಕೃಷ್ಣನ್ಯಾಯಾಧಿಕರಣ ನೀಡಿರುವ ತೀರ್ಪಿಗೆ ಈವರೆಗೂ ಅಧಿಸೂಚನೆ ಹೊರಡಿಸುವಂತೆ ಕೇಂದ್ರವನ್ನು ಅವರು ಕೇಳಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಮತ್ತು ಪ್ರಸ್ತುತ ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಕೇಂದ್ರದ ಬಳಿ ಅಧಿಸೂಚನೆ ಸಂಬಂಧ ಎಂದಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆಯೇ ? ಇಲ್ಲವೆಂದ ಮೇಲೆ ನಮನ್ನು ಟೀಕಿಸುವ ನೈತಿಕತೆ ಅವರಿಗೆ ಇದೆಯೇ ಎಂದು ಕಿಡಿಕಾರಿದರು.

RELATED ARTICLES

Latest News