ಬೆಂಗಳೂರು, ಡಿ.2- ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಸ್ಪರ ಉಪಾಹಾರಕೂಟಗಳ ಮೂಲಕ ರಾಜಿಸಂಧಾನದಲ್ಲಿ ತೊಡಗಿಸಿಕೊಂಡಿದ್ದರೆ, ಅವರನ್ನು ಬೆಂಬಲಿಸಿ ಬಹಿರಂಗ ಹೇಳಿಕೆಗಳನ್ನು ನೀಡಿದ್ದ ಸಚಿವರು, ಶಾಸಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೇ ಬೇಕು ಎಂದು ಕೆಲವು ಶಾಸಕರು ದೆಹಲಿ ಯಾತ್ರೆ ನಡೆಸಿದ್ದರು, ಬಹಿರಂಗ ಹೇಳಿಕೆಗಳನ್ನು ನೀಡಿ, ಪಕ್ಷದ ಶಿಸ್ತು ಸಮಿತಿಯ ನೊಟೀಸ್‌ಗಳನ್ನು ಲೆಕ್ಕಿಸದೆ ತಮ ವಾದವನ್ನು ಪುನರುಚ್ಚರಿಸಿದ್ದರು. ಅವರ್ಯಾರೂ ಈಗ ಸಂಧಾನ ಪ್ರಕ್ರಿಯೆಗಳಲ್ಲಿ ಭಾಗಿಯಾಗಿಲ್ಲ.
ಇತ್ತ ಸಿದ್ದರಾಮಯ್ಯ ಅವರನ್ನೇ ಅಧಿಕಾರದಲ್ಲಿ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಪದಚ್ಯುತಿಗೊಳಿಸಬಾರದು ಎಂದು ಸಚಿವರಾದ ಪ್ರತಿ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವಾರು ಮಂದಿ ಪೇಚಿಗೆ ಸಿಲುಕಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ನೇರವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಾಷ್ ಔಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಅಧಿಕಾರ ಹಂಚಿಕೆಯ ಗೊಂದಲಗಳು ಕಳೆದ 20 ದಿನಗಳಿಗಿಂತಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಕಾವೇರಿದ ಚರ್ಚೆಗಳಿಗೆ ಕಾರಣವಾಗಿತ್ತು. ಶಾಸಕರು, ಸಚಿವರಷ್ಟೆ ಅಲ್ಲದೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿ ಅತಿರೇಕಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ಮಧ್ಯ ಪ್ರವೇಶಿಸಿದರು.
ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಮೂಲಕ ಎಲ್ಲವನ್ನು ಸುಸೂತ್ರವಾಗಿ ಬಗೆಹರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ನಡುವೆ ಏಕಾಏಕಿ ಕಾರ್ಯತಂತ್ರ ಬದಲಾಯಿಸಿದ ವರಿಷ್ಠರು, ದೆಹಲಿಯ ಸಂಧಾನದ ಬದಲಾಗಿ, ಬೆಂಗಳೂರಿನಲ್ಲಿಯೇ ಇಬ್ಬರು ನಾಯಕರು ಪರಸ್ಪರ ಮಾತುಕತೆ ನಡೆಸುವ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು, ಆನಂತರ ಅಗತ್ಯವಾದರೆ ದೆಹಲಿಗೆ ಬರಲಿ ಎಂದು ಸಂದೇಶ ರವಾನಿಸಿದ್ದರು.
ಅದರಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಕರೆ ಮಾಡಿ, ಹೈಕಮಾಂಡ್ ಸಂದೇಶವನ್ನು ತಲುಪಿಸಿದ್ದರು. ವರಿಷ್ಠರ ಸೂಚನೆಯ ಮೇರೆಗೆ ಕಳೆದ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಬೇರೆ ಯಾವ ನಾಯಕರಿಗೂ ಮಧ್ಯ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.
ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಇಂದು ಎರಡನೇ ಹಂತದ ಉಪಹಾರಕೂಟ ಮತ್ತು ಸಂಧಾನ ಪ್ರಕ್ರಿಯೆಗಳನ್ನು ನಡೆಸಲಾಗಿದೆ.
ಸಚಿವ ಸಂಪುಟ ವಿಸ್ತರಣೆಯಾಗಲಿದೆ, ತಮಗೆ ಅದೃಷ್ಟ ಒಲಿಯಲಿದೆ ಎಂದು ಕಾದು ಕುಳಿತಿದ್ದ ಹಲವಾರು ಮಂದಿಗೆ ಈ ಸಂಧಾನ ನಿರಾಶೆಯುಂಟು ಮಾಡಿದೆ.
ಅಧಿಕಾರದ ಸೂತ್ರ ಯಾರತ್ತ ವಾಲಲಿದೆ ಎಂಬ ಸ್ಪಷ್ಟತೆ ಇಲ್ಲದೆ ಕೆಲವರು ಗೊಂದಲಕ್ಕೆ ಒಳಗಾಗಿ, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ಇನ್ನು ಕೆಲವರು ನಿರ್ದಿಷ್ಟವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬಣಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಡಿ.ಕೆ.ಶಿವಕುಮಾರ್ ನಮಲ್ಲಿ ಯಾವುದೇ ಬಣಗಳಿಲ್ಲ. 140 ಮಂದಿ ಶಾಸಕರು ನನ್ನ ಪರವಾಗಿದ್ದಾರೆ. ಸಿದ್ದರಾಮಯ್ಯ ಮತ್ತು ತಾವು ಅಣ್ಣ-ತಮಂದಿರಂತೆ ಇದ್ದೇವೆ ಎಂದು ಹೇಳುವ ಮೂಲಕ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ಪರವಾಗಿ ಧ್ವನಿಯೆತ್ತಿದ ಸಚಿವರಿಗೆ ಈಗ ಇರಿಸು ಮುರಿಸು ಆರಂಭವಾಗಿದೆ. ಅಧಿಕಾರ ಹಂಚಿಕೆಯ ಸಂಧಾನದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸಲಾಗಿತ್ತು. ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಶಕ್ತಿ ಕೇಂದ್ರಗಳ ಸುತ್ತಲೇ ಗಿರಿಕಿ ಹೊಡೆಯುತ್ತಿವೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.
ಈ ಹಿಂದೆ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಜಿ.ಪರಮೇಶ್ವರ್ ಅವರು, ಉಪಹಾರ ಅವರಿಬ್ಬರಿಗೆ ಮಾತ್ರ. ನಮಗೆ ಏನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಕೊನೆಗೆ ತಮಗೆ ಉಪಮುಖ್ಯಮಂತ್ರಿ ಸ್ಥಾನವಾದರೂ ದೊರೆಯಬಹುದು ಎಂಬ ಅಂದಾಜಿನಲ್ಲಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡು ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ಈಗ ಯಾವುದೂ ಇಲ್ಲದಂತಾಗಿದೆ. ಉಪಹಾರ, ಭೋಜನಕೂಟ ಎಲ್ಲವೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಮಾತ್ರವೇ ಎಂಬಂತಾಗಿದೆ.
ಸಚಿವರು ನಡೆಸಿದ ಪ್ರತ್ಯೇಕ ಭೋಜನ ಕೂಟಗಳು ಚಪಾತಿ, ರೊಟ್ಟಿ, ದಾಲ್, ಬಿರಿಯಾನಿ ಸವಿದಿದ್ದಷ್ಟಕ್ಕೆ ಸೀಮಿತವಾಗಿವೆ. ಡಿ.ಕೆ.ಬಣದ ಶಾಸಕರು ಚುಮುಚುಮು ಚಳಿಯಲ್ಲಿ ದೆಹಲಿ ಯಾತ್ರೆ ಮಾಡಿ ಬಂದಿದ್ದಷ್ಟೇ ಭಾಗ್ಯ ಎಂಬಂತಾಗಿದೆ. ಪ್ರತ್ಯೇಕ ಬಣಗಳಲ್ಲಿ ಗುರುತಿಸಿಕೊಂಡಿದ್ದವರು ಈಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಅನ್ಯೋನ್ಯತೆ ಕಂಡು ವಿರೋಧ ಪಕ್ಷಗಳಂತೆ ಕರುಬಲಾರಂಭಿಸಿದ್ದಾರೆ.
