ಬೆಂಗಳೂರು, ನ.28- ಗದ್ದುಗೆ ಗುದ್ದಾಟದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಮುನಿಸು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಇಂದು ಬಹಿರಂಗವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ, ಮಕ್ಕಳ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಅಕ್ಕ ಪಡೆಗೆ ಚಾಲನೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ಬಂದು ಭಾಗವಹಿಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ ಆರಂಭಿಸಿದಾಗ ತಡವಾಗಿ ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮೂಹಿಕವಾಗಿ ಎಲ್ಲರಿಗೂ ಕೈ ಮುಗಿಯುತ್ತ ಪ್ರೇಕ್ಷಕರತ್ತ ತಿರುಗಿ ಕೈ ಬೀಸಿದರು.
ವೇದಿಕೆಯಲ್ಲಿದ್ದ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮತ್ತು ಇತರ ಮಹಿಳಾ ಗಣ್ಯರಿಗೆ ಹಸ್ತಲಾಘವ ನೀಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರತ್ತ ನೋಡುತ್ತಲಿದ್ದರಾದರೂ, ಅದನ್ನು ಕಂಡೂ ಕಾಣದಂತೆ ಡಿ.ಕೆ.ಶಿವಕುಮಾರ್ ವರ್ತಿಸಿದರು. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಒಂದು ಹಂತದಲ್ಲಿ ಅರೆ ಮನಸ್ಸಿನಿಂದ ಮುಖ್ಯಮಂತ್ರಿ ಅವರತ್ತ ಕಣ್ಣು ಹಾಯಿಸಲು ಡಿ.ಕೆ.ಶೀವಕುಮಾರ್ ಮನಸ್ಸು ಮಾಡಿದ್ದರಾದರೂ, ಆ ರೀತಿ ಮಾಡದೇ ತಮ ಪಾಡಿಗೆ ಕುಳಿತರು.
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸದೇ ಇರುವುದನ್ನು ಕಂಡ ಸಿದ್ದರಾಮಯ್ಯ ತಮ ಪಾಡಿಗೆ ತಾವು ಆಹ್ವಾನಪತ್ರ ಮತ್ತು ಅದರಲ್ಲಿದ್ದ ಮಾಹಿತಿಗಳನ್ನು ಓದಲಾರಂಭಿಸಿದರು. ಇದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಂದಕ ನಿರ್ಮಾಣವಾಗಿರುವುದನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿತು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ ಪ್ರಾಸ್ತಾವಿಕ ಭಾಷಣ ಮುಗಿಸಿದ ಬಳಿಕ ಮುಂದಿನ ಭಾಷಣಕಾರರನ್ನಾಗಿ ಯಾರನ್ನು ಆಹ್ವಾನಿಸಬೇಕೆಂಬ ಗೊಂದಲ ಉಂಟಾಯಿತು. ಈ ಬಗ್ಗೆ ಸಿದ್ದರಾಮಯ್ಯ ಅವರ ಮಾರ್ಗದರ್ಶನವನ್ನು ಸಚಿವೆ ಕೇಳಿದರು. ಆಗ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟನೆ ಬಳಿಕ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಅವರಿಗೆ, ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಕೊನೆಯದಾಗಿ ತಾವು ಮಾತನಾಡಲು ಆಹ್ವಾನಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಕಣ್ಣುಗಳು ಪರಸ್ಪರ ಸಂದಿಸಿದವು.
ಮುಂದುವರೆದು ಜ್ಯೋತಿ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸುವಾಗಲೂ ಸಿಎಂ ಹಾಗೂ ಡಿಸಿಎಂ ನಡುವೆ ಅನ್ಯೋನ್ಯತೆ ಇಲ್ಲದೇ ಇರುವುದು ಕಂಡು ಬಂತು. ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೂಡಿ ದೀಪ ಬೆಳಗಿಸಿದರೆ, ಹಿರಿಯ ನಾಯಕಿಯರಾದ ಮಾರ್ಗರೇಟ್ ಆಳ್ವ, ಮೋಟಮ ಅವರು ಎರಡನೇ ಹಂತದಲ್ಲಿ ಜ್ಯೋತಿ ಬೆಳಗಿಸಿದರು. ಆಗ ಡಿ.ಕೆ.ಶಿವಕುಮಾರ್ ತಮ ಮುಂದೆ ನಿಂತಿದ್ದ ಮಕ್ಕಳು ಹಿರಿಯ ನಾಯಕಿಯರಾದ ಕೈ ಹಿಡಿದು ದೀಪ ಬೆಳಗಿಸಲು ನೆರವಾದರು.
ಕೆ.ಹೆಚ್.ಮುನಿಯಪ್ಪ, ರಾಣಿಸತೀಶ್ ದೀಪ ಹಚ್ಚಿದ ಬಳಿಕ ಡಿ.ಕೆ.ಶಿವಕುಮಾರ್ ಮಕ್ಕಳ ಜೊತೆ ಪ್ರತ್ಯೇಕವಾಗಿ ದೀಪ ಹಚ್ಚಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ ತಿರುಗಿಸಿ ತಮ ಆಸನದತ್ತ ತೆರಳಿದರು.ಛಾಯಾಗ್ರಾಹಕರ ಒತ್ತಾಯದ ಮೇರೆಗೆ ಜೊತೆಗೆ ನಿಂತು ಫೋಸ್ ನೀಡುವ ಅನಿವಾರ್ಯತೆ ಎದುರಾದಾಗ ಮುಂದೆ ಹೋಗಿದ್ದ ಸಿದ್ದರಾಮಯ್ಯಅವರನ್ನು ಮರಳಿ ಕರೆಸಲಾಯಿತು. ಆಗ ಡಿ.ಕೆ.ಶಿವಕುಮಾರ್ ಅವರು ಮುಂದಕ್ಕೆ ಬಂದು ನಿಲ್ಲುವಂತೆ ಕೈ ಸನ್ನೆ ಮಾಡಿದ್ದನ್ನು ಹೊರತು ಪಡಿಸಿ, ಬಾಯಿಬಿಟ್ಟು ಮಾತನಾಡಲಿಲ್ಲ.
ಮಾಜಿ ಪ್ರಧಾನಿಗಳಾದ ಜವಾಹರ್‌ಲಾಲ್ ನೆಹರೂ ಮತ್ತು ಇಂದಿರಾಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವಾಗಲೂ ಇಬ್ಬರ ನಡುವೆ ತಾಳ-ಮೇಳ ಇಲ್ಲದೇ ಇರುವುದು ಸ್ಪಷ್ಟವಾಗಿತ್ತು. ಮುಂದುವರೆದು ಅಕ್ಕಪಡೆ, ಗೃಹಲಕ್ಷ್ಮಿವಿವಿಧೋದ್ದೇಶ ಸಹಕಾರ ಸಂಘಗಳ ಉದ್ಘಾಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರತ್ಯೇಕವಾಗಿ ಕಾಣಿಸಿಕೊಂಡರು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮುಂಗಾರು ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಪಾವತಿಸಲು ಚಾಲನೆ ನೀಡಿದರು. ಅದಕ್ಕೆ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲೇ ಇದ್ದರೂ ಗೈರು ಹಾಜರಾಗಿದ್ದರು.
ಗುರುವಾರ ಸಂವಿಧಾನದ ದಿನಾಚರಣೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಭಾಗವಹಿಸುವ ಮೂಲಕ ಒಬ್ಬರನ್ನೊಬ್ಬರು ಸ್ಪಂದಿಸಿರಲಿಲ್ಲ. ಮಂಗಳವಾರ ವಿಶ್ವ ಮೀನು ದಿನಾಚರಣೆಯಲ್ಲಿ ಇಬ್ಬರೂ ಜಂಟಿಯಾಗಿ ಭಾಗವಹಿಸಿದ್ದರು. ಆ ವೇಳೆ ಇಬ್ಬರ ನಡುವೆಯೂ ಸಹಜವಾದ ಮಾತುಕತೆಗಳು ನಡೆದಿದ್ದವು. ಆದರೆ ಅನಂತರ ಒಬ್ಬರ ಮುಖ ಅತ್ತ, ಮತ್ತೊಬ್ಬರ ಮುಖ ಇತ್ತ ಎಂಬಂತಾಗಿದೆ.
ಇಂದು ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದೇ, ಮುನಿಸು ಪ್ರದರ್ಶಿಸಿದ್ದಾರೆ. ಹಿಂದೆ ಇಬ್ಬರ ನಡುವೆ ಯಾವತ್ತೂ ಈ ಮಟ್ಟಿನ ಅಸಮಾಧಾನ ಹಾಗೂ ಕಂದಕ ಕಂಡು ಬಂದಿರಲಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನಡುವೆ ಪ್ರತ್ಯೇಕ ಬಣ ರಾಜಕೀಯಗಳಿವೆ ಎಂದು ಹೇಳಲಾಗಿತ್ತು.
ಆ ವೇಳೆ ಖುದ್ದು ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರೊಂದಿಗೆ ಬೆರೆಯುವ ಮೂಲಕ ಸಹೋದರತ್ವವನ್ನು ಪಾಲಿಸಿದ್ದರು. ಆದರೆ ಇಂದು ಇಬ್ಬರು ಮುಖದಲ್ಲೂ ಅನ್ಯ ಮನಸ್ಕತೆ ಕಂಡು ಬಂತು.
