ಬೆಂಗಳೂರು,ಜ.10- ಮಾತೃಭಾಷೆ ಕಲಿಕೆಯಲ್ಲಿ ಮಲಯಾಳಿಯನ್ನು ಕಡ್ಡಾಯವಾಗಿ ಕಲಿಕೆ ಮಾಡಬೇಕೆಂದು ಕೇರಳ ಸರ್ಕಾರ ಏಕಾಏಕಿ ತೀರ್ಮಾನ ತೆಗೆದುಕೊಂಡಿದ್ದರ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಭಾಷಾ ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ಇದರಲ್ಲಿ ಸಿಎಂ ಮತ್ತು ಡಿಸಿಎಂ ಕೈವಾಡವಿರುವುದರಲ್ಲಿ ಯಾವ ಅನುಮಾನವೂ ಬೇಡ ಎಂದು ಹೇಳಿದರು.
ನಾವು ಸುಮನೆ ಕನ್ನಡ ಕನ್ನಡ ಎನ್ನುತ್ತೇವೆ. ನೀವು ಸುಮನೆ ಮಲಯಾಳಿ ಎಂದು ಹೇಳಿ ಎಂಬ ಮ್ಯಾಚ್‌ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಕರ್ನಾಟಕದ ಪ್ರತಿಯೊಂದು ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಸಂಸದ ಕೆ.ಸಿ.ವೇಣುಗೋಪಾಲ್‌ಗೆ ಇದು ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಕೇರಳದಲ್ಲಿ ಇಂಡಿ ಒಕ್ಕೂಟ ಅಧಿಕಾರದಲ್ಲಿದೆ. ಕಾಂಗ್ರೆಸ್‌ನವರಿಗೆ ಅದು ತುಂಬಾ ಹತ್ತಿರದ ಪಕ್ಷ. ನಾನು ಒದ್ದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎನ್ನುವ ಧೋರಣೆ ಇದು. ಏನೇ ಮಾಡುವ ಮೊದಲು ಚರ್ಚೆ ಆಗುತ್ತದೆ ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯನವರು ಕೇರಳ ಸಿಎಂ ವಿಜಯನ್ ಪಿಣರಾಯ್ ಅವರಿಗೆ ಪತ್ರ ಬರೆದಿದ್ದರಲ್ಲಿ ಯಾವ ವಿಶೇಷತೆಯೂ ಇಲ್ಲ. ಅವರು ಬರೀ ಖಾರ ಅಲ್ಲ, ಉಪ್ಪು-ಖಾರ ಸೇರಿಸಿ ಪತ್ರ ಬರೆಯಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದು ಅಲ್ಲಿನ ಸಿಎಂ ಹೇಳಿದರು. ಅದೇ ರೀತಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿರುವ ಕೇರಳ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದು ಹೇಳಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರತಿಯೊಂದಕ್ಕೂ ಅನ್ಯಾಯ ಎಂದು ಹೇಳುತ್ತಾರೆ. ಅದೇ ರೀತಿ ಈಗ ಕೇರಳದಿಂದ ಅನ್ಯಾಯ ಎಂದು ಯಾಕೆ ಹೇಳುತ್ತಿಲ್ಲ? ಕೇರಳದವರು ಬೆಚ್ಚಿ ಬೀಳುವಂತೆ ಪ್ರತಿಭಟನೆ ಮಾಡಬೇಕು ಆಗ ಮಾತ್ರ ಅವರು ಹೆದರುತ್ತಾರೆ ಎಂದು ಎಚ್ಚರಿಸಿದರು.
ಕರ್ನಾಟಕ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿರುವ ಬಗ್ಗೆ ಮಾತನಾಡಿದ ಅಶೋಕ್, ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಚರ್ಚೆಗೆ ಅವಕಾಶ ಕೊಡಬೇಕಿತ್ತು. ಜನರಿಗೆ ಈ ಮಸೂದೆ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. ವಿಧಾನಸೌಧ ಇರುವುದು ಚರ್ಚೆ ಮಾಡಲೆಂದು ಸಮರ್ಥನೆ ಮಾಡಿಕೊಂಡರು.
ದ್ವೇಷ ಭಾಷಣ ಚರ್ಚೆ ವಿಧೇಯಕದ ಬಗ್ಗೆ ಸರ್ಕಾರ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಚರ್ಚೆಯಾದರೆ ಇದರಲ್ಲಿರುವ ಹುಳುಕು ಗೊತ್ತಾಗಲಿದೆ ಎಂದು ತರಾತುರಿಯಲ್ಲಿ ಅಂಗೀಕಾರ ಮಾಡಿದರು. ಸ್ಪೀಕರ್ ನಡೆ ಕೂಡ ನಮಗೆ ಬೇಸರ ತರಿಸಿದೆ. ಕನಿಷ್ಠ ಪಕ್ಷ ಕರೆದು ಚರ್ಚೆ ಮಾಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಸೂದೆಯನ್ನು ಸದನ ಸಮಿತಿಗೆ ಹಾಕಬೇಕು ಎಂದು ನಾವು ಮನವಿ ಮಾಡಿದ್ದೆವು. ಸೋಮವಾರ ನಾನು ಮತ್ತು ನಮ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರ ಭೇಟಿ ಮಾಡಿ ಮಸೂದೆಗೆ ಅಂಕಿತ ಹಾಕಬೇಡಿ ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಮಸೂದೆಯು ಮಾಧ್ಯಮದ ಕತ್ತು ಹಿಸುಕುವ ಕೆಲಸ ಮಾಡಬಾರದು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವ ಹಾಗಾಗಬಾರದು. ಸೋಮವಾರ ನಾವು ರಾಜ್ಯಪಾಲರ ಭೇಟಿ ಮಾಡಿ ಆಗಿರುವ ತಪ್ಪನ್ನು ಸರಿಪಡಿಸಿ ಎಂದು ಮನವಿ ಮಾಡಲಿದ್ದೇವೆ ಎಂದು ಹೇಳಿದರು.
