ಬೆಂಗಳೂರು, ಜ.6- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿಗೆ ಏಳು ವರ್ಷ, 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುವ ಮೂಲಕ, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಸರ್ಕಾರದ ವತಿಯಿಂದಾಗಲಿ ಯಾವುದೇ ಸಂಭ್ರಮ ಕಂಡು ಬರುತ್ತಿಲ್ಲ. ಇದು ಒಳಗೊಳಗೆ ಕುದಿಯುತ್ತಿರುವ ಅಸೂಯೆಯ ದಿಗ್ದರ್ಶನ ಮಾಡಿಸುತ್ತಿದೆ.
ಸಂಭ್ರಮ ಕಳೆಗುಂದಿರುವ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಉಳಿದುಕೊಂಡಿದ್ದರೆ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳ್ಳಾರಿಯಲ್ಲಿ ಗಲಭೆ ಪೀಡಿತ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ. ಬಹುತೇಕ ಸಚಿವರು ತಮ ತಮ ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕನಿಷ್ಠ ಸಿಹಿ ಹಂಚುವ ವಾತಾವರಣವು ಕಂಡುಬಂದಿಲ್ಲ.
ಅಹಿಂದ ಯುವ ಮುಖಂಡರ ಒಕ್ಕೂಟದಿಂದ ನೆಲಮಂಗಲದ ಭಕ್ತನಪಾಳ್ಯದಲ್ಲಿ ನಾಟಿ ಕೋಳಿ ಔತಣ ಕೂಟ ಆಯೋಜಿಸಲಾಗಿತ್ತು. ಮೈಸೂರು ಸೇರಿದಂತೆ ನಾಡಿನ ಹಲವು ಕಡೆಗಳಲ್ಲಿ ನಾಟಿಕೋಳಿ ಔತಣಕೂಟ ನಡೆದಿದೆ. ಕೆಲವು ಕಡೆಗಳಲ್ಲಿ ಸಿದ್ದರಾಮಯ್ಯ ಅವರ ಪುತ್ರರೂ ಆಗಿರುವ ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್ ಎಂ ರೇವಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಭಿಮಾನದ ಅಭಿನಂದನೆ ಹೆಸರಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಬೆಂಬಲಿಗರು ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಆಗಿರುವ ದಾಖಲೆ ಜೊತೆಗೆ ಪೂರ್ಣಾವಧಿಯ ಮುಖ್ಯಮಂತ್ರಿಯೂ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಯ ಮುಖ್ಯಮಂತ್ರಿ ಎಂದು ಘೋಷಿಸಬೇಕು ಎಂಬುದು ಬೆಂಬಲಿಗರ ಆಗ್ರಹವಾಗಿತ್ತು.
ಚಿಂತೆ ಬೇಡ ಎಂದಿರುವ ವೇಣುಗೋಪಾಲ್:
ನಿನ್ನೆ ಕೇರಳದ ವೈಯನಾಡು ಲೋಕಸಭಾ ಕ್ಷೇತ್ರದಿಂದ ದೆಹಲಿಗೆ ಬೆಂಗಳೂರು ಮೂಲಕ ತೆರಳುವ ಮಾರ್ಗ ಮಧ್ಯತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಅವಧಿ ಮುಖ್ಯಮಂತ್ರಿಯಾದ ದಾಖಲೆ ನಿರ್ಮಿಸುತ್ತಿರುವುದಾಗಿ ಸಿದ್ದರಾಮಯ್ಯ ಅವರನ್ನು ಕೆ.ಸಿ.ವೇಣುಗೋಪಾಲ್ ಅಭಿನಂದಿಸಿದ್ದಾರೆ ಎಂದು ತಿಳಿದುಬಂದಿದೆ.
ನಾಯಕತ್ವ ಬದಲಾವಣೆಯ ಚರ್ಚೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ನಿಮ ಪಾಡಿಗೆ ನೀವು ಆಡಳಿತ ಮುಂದುವರಿಸಿ ಎಂದು ಅಭಯ ನೀಡಿರುವುದಾಗಿ ತಿಳಿದು ಬಂದಿದೆ. ಸಚಿವ ಸಂಪುಟ ಪುನರ್ ರಚನೆಯ ವಿಚಾರವಾಗಿ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಸಂಕ್ರಾಂತಿಯ ಬಳಿಕ ದೆಹಲಿಗೆ ಬನ್ನಿ ಈ ಬಗ್ಗೆ ಮಾತನಾಡೋಣ ಎಂದು ವೇಣುಗೋಪಾಲ್ ಹೇಳಿದ್ದಾರೆ ಎಂದು ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.
ಡಿ.ಕೆ.ಶಿವಕುಮಾರ್ ಬಣದಲ್ಲಿ ಮೌನ:
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಡಿ.ಕೆ.ಶಿವಕುಮಾರ್ ಬೆಂಬಲಿಗರು ಮೌನಕ್ಕೆ ಶರಣಾಗಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ರಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ನೂರಕ್ಕೆ 200ರಷ್ಟು ಖಚಿತ ಎಂದು ಹೇಳುತಿದ್ದರು. ಆ ಎರಡು ದಿನಾಂಕಗಳ ಪೈಕಿ ಜನವರಿ 6 ಇಂದಿಗೆ ಮುಗಿದು ಹೋಗಿದೆ. ಇಕ್ಬಾಲ್ ಹುಸೇನ್ ಅವರ ಭವಿಷ್ಯ ಹುಸಿಯಾಗಿದೆ. ಜ.9ಕ್ಕೆ ಮೂರು ದಿನ ಮಾತ್ರ ಬಾಕಿ ಇದೆ. ಆ ವೇಳೆಗೂ ನಾಯಕತ್ವ ಬದಲಾಗುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ.
ಅವಧಿ ಪೂರ್ಣಗೊಳಿಸುತ್ತಾರೆ:
ಈ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಿದ್ದರಾಮಯ್ಯ ಐದು ವರ್ಷಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಅವಧಿಗೂ ತಾವೇ ಮುಂದುವರೆಯುವುದಾಗಿ ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿದ್ದಾರೆ. ಅದರಂತೆಯೇ ನಡೆಯಲಿದೆ ಎಂದು ಹೇಳುವ ಮೂಲಕ ನಾಯಕತ್ವದ ಬದಲಾವಣೆಯ ಚರ್ಚೆಗಳಿಗೆ ಚರ್ಚೆಗಳನ್ನು ತಳ್ಳಿ ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಗೂಡಾರ್ಥ:
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹೆಚ್ಚಿನ ಅಧಿಕಾರವಧಿ ಆಡಳಿತ ನಡೆಸಿದ ದಾಖಲೆ ನಿರ್ಮಿಸುತ್ತಿರುವುದಕ್ಕೆ ನಿನ್ನೆ ಸಂಜೆ ಅಭಿನಂದನೆ ಸಲ್ಲಿಸಿರುವ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ, ಅವರಿಗೆ ತುಂಬು ಹೃದಯದ ಅಭಿನಂದನೆ ಎಂದಿದ್ದಾರೆ. ಸಿದ್ದರಾಮಯ್ಯ ಹಿಂದೆಯೂ ಇತಿಹಾಸ ಪುಟಕ್ಕೆ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ ಎಂದರು.
ಎಲ್ಲರಿಗೂ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಅಭಿಪ್ರಾಯ ಇರುತ್ತದೆ. ನಾವು ಹಳ್ಳಿಯಿಂದ ಬಂದವರು ಇಲ್ಲಿಯವರೆಗೂ ಮುಟ್ಟಿದ್ದೇವೆ. ಇದಕ್ಕಿಂತ ಇನ್ನೇನು ಬೇಕು, ನಾನು ಯಾವುದನ್ನು ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ. ಎಲ್ಲವೂ ತಾನಾಗಿಯೇ ನನ್ನ ಬಳಿಗೆ ಬರುತ್ತದೆ. ನನಗೆ ಪ್ರತಿದಿನವೂ ಶುಭ ಗಳಿಗೆ ಆಗಿದೆ ಎಂದು ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಹುದ್ದೆಯ ಚರ್ಚೆಗೆ ಪರೋಕ್ಷವಾಗಿ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಮತ್ತೆ ಗರಿಗೆದರಿದ ಸಂಪುಟ ಪುನರ್ ರಚನೆ:
ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನರಚನೆಯ ಮೂಲಕ ತಮ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ಹೈಕಮಾಂಡ್ ಅನುಮತಿಸಲಿದೆಯೋ ? ಇಲ್ಲವೋ ಎಂಬ ಕುತೂಹಲಕಾರಿ ಪ್ರಶ್ನೆ ಹೆಚ್ಚಾಗಿದೆ.ಈ ನಡುವೆ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ್ದಕ್ಕಿಂತಲೂ ನಾಯಕತ್ವ ಬದಲಾವಣೆಯ ತೂಗುಗತ್ತಿಯೇ ಹೆಚ್ಚು ಸದ್ದು ಮಾಡುತ್ತಿರುವುದು ಕಂಡು ಬಂದಿದ್ದು, ದಾಖಲೆಯ ಸಂಭ್ರಮ ಮಂಕಾಗಿದೆ.
