ಬೆಂಗಳೂರು, ಡಿ.27- ಬೆಂಗಳೂರು, ಡಿ.27- ನಾಯಕತ್ವ ಬದಲಾವಣೆಯ ಚರ್ಚೆಗಳು ಮುಗಿದ ಅಧ್ಯಾಯ ಎಂದು ಪ್ರತಿಪಾದಿಸುತ್ತಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆಗೆ ಮತ್ತೊಂದು ಸುತ್ತಿನ ಕಸರತ್ತು ಆರಂಭಿಸಿದ್ದಾರೆ.ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಗೊಂದಲಗಳಿಗೆ ಹೈಕಮಾಂಡ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಅರಿವಾಗುತ್ತಿದ್ದಂತೆ, ಅಭಿಪ್ರಾಯ ತಮ್ಮ ಪರವಾಗಿದೆ ಎಂದು ಮನಗಂಡ ಮುಖ್ಯಮಂತ್ರಿ ಅವರು ಸಂಪುಟ ಪುನರ್ ರಚನೆಗೆ ಕೈ ಹಾಕುವ ಮೂಲಕ ತಮ ನಾಯಕತ್ವವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಅವರು ಇಂದು ಅಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಅದಕ್ಕೂಮುನ್ನಾ ವರಿಷ್ಠ ಮಂಡಳಿಯ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಸಿದ್ದರಾಮಯ್ಯ ಅವರು ತಮದೇ ಆದ ದಾಳ ಉರುಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದರೆ ಮುಂದಿನ ಎರಡೂವರೆ ವರ್ಷ ತಮ ಸ್ಥಾನ ಅಬಾಧಿತ ಎಂಬ ಲೆಕ್ಕಾಚಾರದಲ್ಲಿ, ಸಂಪುಟ ಪುನರ್ ರಚನೆಗೆ ಹೈಕಮಾಂಡ್ ನಾಯಕರ ಅನುಮತಿ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಹೈಕಮಾಂಡ್ ಮಣಿದಿದ್ದೇ ಆದರೆ ಸಂಕ್ರಾಂತಿಯ ವೇಳೆಗೆ ಸಚಿವ ಸಂಪುಟ ಪುನರ್ ರಚನೆಯಾಗಲಿದೆ.
ದೆಹಲಿಗೆ ತೆರಳುವ ಮುನ್ನ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, 4-5 ತಿಂಗಳ ಹಿಂದೆಯೇ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಅನುಮತಿ ನೀಡಿತ್ತು. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿ ಎಂಬ ಕಾರಣಕ್ಕಾಗಿ ತಾವೇ ವಿಳಂಬ ಮಾಡಿದ್ದಾಗಿ ಹೇಳಿದ್ದಾರೆ.
ಈಗ ಎರಡೂವರೆ ವರ್ಷ ದಾಟಿದ್ದು ಸಂಪುಟ ಪುನರ್ ರಚನೆಗೆ ಕೈ ಹಾಕುವ ಸಾಧ್ಯತೆ ಇದೆ. ಈಗಾಗಲೇ ಬಿ.ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರ ರಾಜೀನಾಮೆಯಿಂದ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ. ಅವುಗಳ ಜೊತೆಯಲ್ಲಿ ಸರಿಯಾಗಿ ಕೆಲಸ ಮಾಡದ 10 ಕ್ಕೂ ಹೆಚ್ಚು ಮಂದಿ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಯುವ ಹಾಗೂ ಉತ್ಸಾಹಿಗಳಿಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿಯವರು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಡಾ.ಎಂ.ಸಿ. ಸುಧಾಕರ್, ಜಮೀರ್ ಅಹದ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದರು. ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನರೇಗಾ ಯೋಜನೆ ಕುರಿತಂತೆ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಸಚಿವರೊಂದಿಗೆ ಮುಖ್ಯಮಂತ್ರಿಯವರು ಚರ್ಚೆ ನಡೆಸಿದ್ದರು. ಜೊತೆಯಲ್ಲಿ ಸಂಪುಟದಲ್ಲಿನ ಗೊಂದಲಗಳ ಬಗ್ಗೆಯೂ ಹೈಕಮಾಂಡ್ ಗಮನಕ್ಕೆ ತರಲು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದ ಬಂದಿದೆ.
ಡಿ.ಕೆ.ಶಿವಕುಮಾರ್ ಬಣ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆಗೆ ಅನುಮತಿ ಪಡೆದು, ಆ ಮೂಲಕ ತಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಲು ಮುಖ್ಯಮಂತ್ರಿ ತಯಾರಿ ನಡೆಸಿಕೊಂಡಿದ್ದಾರೆ.
