ಬೆಂಗಳೂರು,ಡಿ.13- ದಲಿತರ ಹಣ ದುರ್ಬಳಕೆ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತ ಸಮುದಾಯದ ನಾಯಕರ ಬೆನ್ನಿಗೆ ಚೂರಿ ಹಾಕಿ ಎರಡು ಬಾರಿ ಅಧಿಕಾರಕ್ಕೇರಿರುವ ಸಿಎಂ ಸಿದ್ದರಾಮಯ್ಯನವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ ಎಂದು ಗುಡುಗಿದ್ದಾರೆ.
ದಲಿತರ ಅಭ್ಯುದಯಕ್ಕಾಗಿ ವಿನಿಯೋಗ ವಾಗಬೇಕಾಗಿದ್ದ ?25,000 ಕೋಟಿ ರೂಪಾಯಿ ಎಸ್‌ಸಿಪಿ/ಟಿಎಸ್‌ಪಿ ಹಣವನ್ನ ಗ್ಯಾರೆಂಟಿ ಹೆಸರಿನಲ್ಲಿ ಕಬಳಿಸಿ ದಲಿತರಿಗೆ ವಂಚನೆ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ ಇದೇನಾ ನಿಮ ಸಾಮಾಜಿಕ ನ್ಯಾಯ? ಇದೇನಾ ದಲಿತರ ಬಗ್ಗೆ ನಿಮಗಿರುವ ಬದ್ಧತೆ? ಎಂದು ಪ್ರಶ್ನಿಸಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ಕನ್ನಡಿಗರ ಖಜಾನೆ ಲೂಟಿ ಮಾಡಿ ರಾಜ್ಯವನ್ನು ಅಭಿವೃದ್ಧಿಶೂನ್ಯ ಮಾಡಿರುವ ಕಾಂಗ್ರೆಸ್ ಸರ್ಕಾರ ನಾಡಿನ ಬಡವರು, ರೈತರು, ಮಹಿಳೆಯರು ಹಾಗೂ ಯುವಕರಿಗೆ ಮೋಸ ಮಾಡುತ್ತಿದೆ ದಲಿತ ವಿರೋಧಿ_ ಕಾಂಗ್ರೆಸ್ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
