ಹುಬ್ಬಳ್ಳಿ,ಜ.24-ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಬೇಕಿದ್ದ ಮನೆ ಹಸ್ತಾಂತರ ಕಾರ್ಯಕ್ರಮ ಆರಂಭವಾಗುವ ಮುನ್ನವೇ ವೇದಿಕೆ ಮುಂಭಾಗ ಅಳವಡಿಸಿದ್ದ ಕಟೌಟ್ಗಳು ಏಕಾಏಕಿ ಕುಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ನಗರದ ಮಂಟೂರು ರಸ್ತೆಯಲ್ಲಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣಗೊಂಡಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮ ಇಂದು ಹಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ವೇದಿಕೆ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ಗಾಂಧಿ, ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರ ಬೃಹತ್ ಕಟೌಟ್ಗಳನ್ನು ಅಳವಡಿಸಲಾಗಿತ್ತು.
ಕಟೌಟ್ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಈ ಅವಘಡ ಸಂಭವಿಸಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆ ಹಾಗೂ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.ಕುಸಿದು ಬಿದ್ದ ಕಟೌಟ್ಗಳನ್ನು ತೆರವುಗೊಳಿಸಲಾಗಿದೆ.
ಆರೋಗ್ಯ ವಿಚಾರಿಸಿದ ಎಸ್ಪಿ:
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಕಿಮ್ಸೌ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಹೋನಕೇರಿ ಅವರೂ ಸಹ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ, ಗಾಯಾಳುಗಳಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಒಬ್ಬರನ್ನು ಕಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿದೆ.ಎಲ್ಲರೂ ಆರೋಗ್ಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅವರು ಸ್ಪಷ್ಟ ಪಡಿಸಿದರು.
