ಬೆಂಗಳೂರು,ಜ.15-ಶಿಡ್ಲಘಟ್ಟದ ನಗರ ಸಭೆ ಪೌರಾಯುಕ್ತರಾದ ಅಮೃತಗೌಡ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ನಾಪತ್ತೆಯಾಗಿದ್ದಾರೆ. ಬೆದರಿಕೆ ಹಾಗೂ ನಿಂದನೆ ಬಗ್ಗೆ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗುತ್ತಿದ್ದಂತೆ ರಾಜೀವ್‌ಗೌಡ ಕಣರೆಯಾಗಿದ್ದು ಅವರ ಮೊಬೈಲ್ ಫೋನ್‌ಗಳು ಸ್ವಿಚ್‌ಆಫ್ ಆಗಿವೆ.
ರಾಜೀವ್‌ಗೌಡ ಪತ್ತೆಗೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು ಹಲವು ಮಾಹಿತಿಗಳನ್ನು ಕಲೆಹಾಕುತ್ತಿವೆ. ಶಿಡ್ಲಘಟ್ಟ ನಗರದ ವಿವಿಧ ಕಡೆಗಳಲ್ಲಿ ಕಲ್ಟ್ ಸಿನಿಮಾ ಪ್ರಚಾರಕ್ಕಾಗಿ ಕಟ್ಟಲಾಗಿದ್ದ ಬ್ಯಾನರ್‌ಗಳನ್ನು ಹಾಕಲಾಗಿತ್ತು.
ನಗರದ ಕೋಟೆ ವೃತ್ತದಲ್ಲಿ ಹಾಕಲಾಗಿದ್ದ ಬ್ಯಾನರ್‌ನಿಂದ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಆಗಿದ್ದರಿಂದ ಬ್ಯಾನರ್ ತೆರವುಗೊಳಿಸಲಾಗಿದೆ.ಈ ವಿಷಯ ತಿಳಿದ ರಾಜೀವ್‌ಗೌಡ ಅವರು ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿ ಬೆದರಿಕೆಯಾಕಿದ್ದಾರೆ.
ಇದರಿಂದ ಬೇಸರಗೊಂಡ ಅಮೃತಗೌಡ ಅವರು ಕಣ್ಣೀರು ಹಾಕಿ ನನ್ನ ಆತಸ್ಥೈರ್ಯವನ್ನು ಕುಂದಿಸಿದ್ದಾರೆಂದು ನೊಂದು ನುಡಿದಿದ್ದಾರೆ.ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ. ಅಲ್ಲದೇ ಮತ್ತೊಂದು ಎಫ್‌ಐಆರ್ ಸಹ ದಾಖಲಾಗಿದೆ.
