ಬೆಂಗಳೂರು, ಜ.26- ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾದ 400 ಕೋಟಿ ರೂಪಾಯಿಗಳ ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಣ ನಮ್ಮ ಪಕ್ಷದ ನಾಯಕರಿಗೆ ಸೇರಿದ್ದರೂ ತನಿಖೆ ಮಾಡಿ ಸಾರ್ವಜನಿಕವಾಗಿ ಸತ್ಯ ಬಹಿರಂಗ ಪಡಿಸಿ ಎಂದು ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಗಣರಾಜ್ಯೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಚೋರ್ಲಾ ಘಾಟ್ ಬಳಿ ನಡೆದಿದೆ ಎನ್ನಲಾದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಪೊಲೀಸರು ಮಹಾರಾಷ್ಟ್ರಕ್ಕೆ ಹೋಗಿ, ತನಿಖೆಗೆ ಯತ್ನಿಸಿದ್ದರು. ಆದರೆ ಅಲ್ಲಿನ ಪೊಲೀಸರು ನಮಗೆ ಯಾವುದೇ ರೀತಿಯ ಮಾಹಿತಿ ಕೊಟ್ಟಿಲ್ಲ. ಒಂದು ವೇಳೆ ಪ್ರಕರಣದ ವಿವರ ನೀಡಿದ್ದರೆ ತನಿಖೆ ಮಾಡಲು ನಮ ಪೊಲೀಸರು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದ ದರೋಡೆಗೆ ಸಂಬಂಧಿಸಿದಂತೆ ಜನವರಿ 9ರಂದು ಪ್ರಕರಣ ದಾಖಲಾಗಿದೆ. ಆ ಹಣ ಯಾರಿಗೆ ಸೇರಿದ್ದು ಎಂಬುದು ಪ್ರಶ್ನಾರ್ಹ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದವರು ಯಾರೇ ಸೇರಿರಲಿ, ತನಿಖೆ ಆಗಬೇಕು. 400 ಕೋಟಿ ರೂಪಾಯಿಗಳನ್ನು ಎಲ್ಲಿಂದ, ಯಾರು, ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ವಿಚಾರಗಳು ಹೊರಬರಬೇಕು. ಮಹಾರಾಷ್ಟ್ರದವರು ಸಹಕಾರ ನೀಡಿದ್ದರೆ ನಮ ರಾಜ್ಯದ ಪೊಲೀಸರು ಯಾರೇ ಭಾಗಿಯಾಗಿದ್ದರೂ ಹಿಡಿದುಕೊಂಡು ಬರುತ್ತಾರೆ ಎಂದರು.
ಚಲಾವಣೆಯಿಂದ ವಾಪಸ್ ಪಡೆಯಲಾಗಿರುವ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬದಲಾವಣೆ ಮಾಡಿ ಕೊಡಬೇಕಿರುವುದು ಬ್ಯಾಂಕುಗಳು ಮಾತ್ರ. ಯಾವ ಬ್ಯಾಂಕುಗಳು ಅಷ್ಟು ಹಣವನ್ನು ಬದಲಾಯಿಸಿಕೊಡಲು ಸಿದ್ಧವಾಗಿದ್ದವು ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ನಿಷೇಧಕ್ಕೆ ಒಳಗಾಗಿರುವ 2 ಸಾವಿರ ಮುಖ ಬೆಲೆಯ ನೋಟುಗಳ 400 ಕೋಟಿ ರೂಪಾಯಿ ಹಣವನ್ನು ಟ್ರಕ್ ಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದಾದರೆ ಕೇಂದ್ರ ಗೃಹ ಸಚಿವಾಲಯ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ಹಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ ಈವರೆಗಿನ ವರದಿಗಳ ಪ್ರಕಾರ ಆ ಹಣಕ್ಕೆ ಗೋವಾ, ಮಹಾರಾಷ್ಟ್ರ, ಗುಜರಾತಿನ ಸಂಪರ್ಕ ಇದೆ ಎನ್ನಲಾಗುತ್ತಿದೆ. ಅಲ್ಲಿರುವುದೆಲ್ಲ ಬಿಜೆಪಿ ಸರ್ಕಾರಗಳಲ್ಲವೇ ? ಗುಜರಾತಿನಲ್ಲಿ 25 ವರ್ಷಗಳಿಂದ ಬಿಜೆಪಿ ಸರ್ಕಾರ ಇದೆ. ಮಹಾರಾಷ್ಟ್ರದಲ್ಲಿ ಹತ್ತು ಹದಿನೈದು ವರ್ಷಗಳಿಂದ, ಗೋವಾದಲ್ಲೂ ಸರಿಸುಮಾರು ಅಷ್ಟೇ ಅವಧಿಯಲ್ಲಿ ಬಿಜೆಪಿ ಆಡಳಿತ ಇದೆ. ಆ ಸರ್ಕಾರಗಳ ಮೂಗಿನ ಅಡಿಯಲ್ಲೇ ಈ ರೀತಿಯ ಹಣ ಸಾಗಾಣಿಕೆಯಾಗುತ್ತಿದೆ ಎಂದರೆ ಇದಕ್ಕೆ ಯಾರು ಹೊಣೆ? ಎಂದರು.
ಹಣ ಯಾರಿಗೆ ಸೇರಿದ್ದು ಎಂಬುದು ತನಿಖೆಯಾಗಿ ಸತ್ಯ ಹೊರ ಬರಬೇಕು. ಕಾಂಗ್ರೆಸ್, ಬಿಜೆಪಿ, ಶಿವಸೇನೆ ಸೇರಿದಂತೆ ಯಾರಿಗೆ ಸೇರಿದ್ದರೂ ಕ್ರಮವಾಗಲಿ ಎಂದು ಹೇಳಿದರು.
ಬಿಜೆಪಿಯ ಕೆಲ ಶಾಸಕರು, ಆ ಹಣವನ್ನು ಬ್ಲ್ಯಾಕ್ನಿಂದ ವೈಟ್ ಮಾಡಲು ತಿರುಪತಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅದನ್ನು ಚುನಾವಣೆಗೆ ಬಳಕೆ ಮಾಡುವ ಯತ್ನಗಳಾಗಿವೆ ಎಂದಿದ್ದಾರೆ. ತಿರುಪತಿ ಇರುವ ರಾಜ್ಯದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದು ಗಮನಾರ್ಹ ಅಲ್ಲವೇ ?
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಅಕ್ರಮವಾದ ಈ ಹಣದ ಸಂಪರ್ಕಗೊಳ್ಳುತ್ತಿದೆ. ಆದರೆ ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ. ಸರಕಾರಗಳಿಗೆ ದೊರೆಯದ ಮಾಹಿತಿಗಳು ಬಿಜೆಪಿ ಶಾಸಕರಿಗೆ ಹೇಗೆ ಸಿಗುತ್ತಿವೆ? ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿ ದೇಶದಲ್ಲಿರುವ ಎಲ್ಲಾ ಕಪ್ಪು ಹಣ ವಾಪಸ್ ಬಂದಿದೆ ಎಂದು ಊರೆಲ್ಲಾ ಹೇಳಿಕೊಂಡು ಓಡಾಡಿದ್ದಾರೆ. ಹಾಗಿದ್ದ ಮೇಲೆ 400 ಅಥವಾ ಸಾವಿರ ಕೋಟಿ ರೂಪಾಯಿ ಟ್ರಕ್ ನಲ್ಲಿ ಹೇಗೆ ಸಿಗುತ್ತಿದೆ? ಮೋದಿ ಅವರಿಗೆ ಗುಜರಾತ್ ನಲ್ಲಿ ರೊಟ್ಟಿ ಮಾಡುವುದು ಗೋತ್ತಾಗುತ್ತದೆ. ಜೆನ್ ಝಿಯವರು ಭಜನ್ ಕ್ಲಬ್ ನಲ್ಲಿ ಆಸಕ್ತರಾಗಿರುವುದನ್ನು ತಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಉಲ್ಲೇಖಿಸುತ್ತಾರೆ. ಅಂತಹ ವಿಚಾರಗಳಿಗೆ ಪ್ರಧಾನಿಯವರ ಬಳಿ ಸಮಯ ಇದೆ. ಆದರೆ 400 ಕೋಟಿ ಸಾಗಾಣಿಕೆ ಮಾಡುತ್ತಿರುವುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಚುನಾವಣೆಯ ವೇಳೆ ಪ್ರತ್ಯಕ್ಷವಾಗಿ ಅಬ್ಬರಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಎಲ್ಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಗುಜರಾತಿನ ವಿರಾಟ್, ಮಹಾರಾಷ್ಟ್ರದ ಕಿಶೋರ್ ಅವರು ಹಣಕ್ಕೆ ವಾರಸುದಾರರು ಎಂದು ಹೇಳಲಾಗುತ್ತಿದೆ. ಚಲಾವಣೆಯಿಂದ ಹಿಂಪಡೆಯಲಾಗಿರುವ 2 ಸಾವಿರ ಮುಖಬೆಲೆಯ ನೋಟುಗಳು ಟ್ರಕ್ ಗಳಲ್ಲಿ ಸಿಗಲು ಹೇಗೆ ಸಾಧ್ಯ ? ಗುಜರಾತಿನಲ್ಲಿ ಇವುಗಳನ್ನು ಮುದ್ರಿಸಲು ಮುದ್ರಣ ಯಂತ್ರ ಇಟ್ಟಿದ್ದಾರೆಯೇ? ಸೆಮೀಕಂಡಕ್ಟರ್ ತಯಾರಿಸುತ್ತೇವೆ ಎಂದಿದ್ದವರು, ಹಣ ಮುದ್ರಿಸುವ ಯಂತ್ರವನ್ನು ಇಟ್ಟಿದ್ದಾರೆ ಎಂದು ಅನುಮಾನ ವ್ಯಕ್ತ ಪಡಿಸಿದರು.
ಟ್ರಸ್ಟಿಗೆ ಸೇರಿದ ಹಣ ಎಂದು ಕೆಲವರು ಹೇಳುತ್ತಿದ್ದಾರೆ ಒಂದು ವೇಳೆ ಅದು ನಿಜವಾಗಿದ್ದರೂ ಅದಕ್ಕೆ ಏಕೆ ತೆರಿಗೆ ಪಾವತಿಸಿಲ್ಲ. ಅಷ್ಟು ದೊಡ್ಡ ಮೊತ್ತದ ಹಣ ಒಂದೇ ಕಡೆ ಇಟ್ಟಿರುವುದು ಸಕ್ರಮವೇ ? ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಏನು ಮಾಡುತ್ತಿವೆ? ಈ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು ಮಾತ್ರ ಸೀಮಿತವೇ? ಎಂದರು.
ದರೋಡೆಯಲ್ಲಿ ಕರ್ನಾಟಕದ ಪೊಲೀಸರು ಭಾಗಿಯಾಗಿದ್ದೇ ಆಗಿದ್ದರೆ, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನಮ ಕಣ್ಣೆದುರಿಗೆ ಇರುವ ಪ್ರಶ್ನೆ ಎಂದರೆ ಎರಡು ಸಾವಿರ ಮುಖಬೆಲೆಯ ನೋಟುಗಳು ಎಲ್ಲಿಂದ ಬಂದವು, ಎಲ್ಲಿಗೆ ಹೋಗುತ್ತಿದ್ದವು. ಅವು ಅಸಲಿಯೇ ಅಥವಾ ನಕಲಿಯೇ ? ಎಂಬುದು ಗೊತ್ತಾಗಬೇಕಿದೆ ಎಂದರು.
