ಬೆಂಗಳೂರು,ಡಿ.25- ಕಂಟೈನರ್ ಲಾರಿ, ಬಸ್‌ನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ರಭಸದಿಂದ ಗುದ್ದಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ರಸ್ತೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಅಪಘಾತ ಹೇಗಾಗಿದೆ ಎಂಬುದನ್ನು ವಿವರಿಸಿದರು. ಇದುವರೆಗಿನ ತನಿಖೆ ಪ್ರಕಾರ ಕಂಟೈನರ್ ಲಾರಿ, ಬಸ್‌ನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಗುದ್ದಿದ್ದರಿಂದ ಡೀಸೆಲ್ ಸೋರಿಕೆಯಾಗಿ ಈ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದರು.
ಈತನಕ 5 ಮಂದಿ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ 4 ಮಂದಿ ಹಾಗೂ ಟ್ರಕ್‌ನ ಚಾಲಕ ಸೇರಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.ಆದಷ್ಟು ಬೇಗ ಶವಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು. ಅಪಘಾತದ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದರು.
ಅಪಘಾತಕ್ಕೊಳಗಾದ ಖಾಸಗಿ ಬಸ್‌ನ ಹಿಂದೆ ಇದ್ದ ಪ್ರವಾಸಿ ಶಾಲಾ ಬಸ್ ಸಹ ಜಖಂಗೊಂಡಿದ್ದು, ಅದರ ಚಾಲಕ ಇಡೀ ಘಟನೆಗೆ ಸಾಕ್ಷಿಯಾಗಿದ್ದಾರೆ. ಅವರ ಹೇಳಿಕೆಯನ್ನೂ ಸಹ ಪಡೆದುಕೊಂಡಿದ್ದೇವೆ. ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು, ಸಿಬ್ಬಂದಿಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದಾರೆ.
