ಬೆಳಗಾವಿ,ಡಿ.13- ಪಡಿತರಚೀಟಿಯಲ್ಲಿನ ಹೆಸರು ಸೇರ್ಪಡೆ/ ತಿದ್ದುಪಡಿ ಮಾಡಲು ನಿರಂತರವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಗಮನಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಸಚಿವರು, ತುರ್ತು ವೈದ್ಯಕೀಯ ಪರಿಸ್ಥಿತಿ ಹಿನ್ನಲೆಯುಳ್ಳ ಅರ್ಹರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಹಾಗೂ ಪಿವಿಟಿಜಿಎಸ್‌ರಡಿ ಬರುವ ಬುಡಕಟ್ಟು ಸಮುದಾಯದವರಿಗೆ ಹೊಸ ಆದ್ಯತಾ ಪಡಿತರಚೀಟಿಯನ್ನು ಕಾಲಕಾಲಕ್ಕೆ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಆದ್ಯತಾ ಪಡಿತರಚೀಟಿ ಪಡೆದಿರುವವರಲ್ಲಿ ಅನರ್ಹರನ್ನು ಪತ್ತೆಹಚ್ಚುವ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, ಅನರ್ಹ ಪಡಿತರಚೀಟಿಯನ್ನು ರದ್ದುಪಡಿಸಿದಾಗ ಅಷ್ಟೇ ಪ್ರಮಾಣದ ಹೊಸ ಪಡಿತರಚೀಟಿ ನೀಡಲು ಅವಕಾಶವಿರುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ರಾಜ್ಯದಲ್ಲಿ 4,01,93,000 ಫಲಾನುಭವಿಗಳಿಗೆ ಪಡಿತರ ವಿತರಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ ರಾಜ್ಯದಲ್ಲಿ 4,53,89,504 ಫಲಾನುಭವಿಗಳಿಗೆ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
