Friday, December 19, 2025
Homeರಾಜ್ಯಶಕ್ತಿದೇವತೆಯ ಮೊರೆ ಹೋದ ಡಿಸಿಎಂ ಡಿಕೆಶಿ, ಇಷ್ಟಾರ್ಥ ಸಿದ್ಧಿಯ ಪ್ರಶ್ನೆ

ಶಕ್ತಿದೇವತೆಯ ಮೊರೆ ಹೋದ ಡಿಸಿಎಂ ಡಿಕೆಶಿ, ಇಷ್ಟಾರ್ಥ ಸಿದ್ಧಿಯ ಪ್ರಶ್ನೆ

DCM DK Shivakumar

ಬೆಳಗಾವಿ,ಡಿ.19- ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಗೊಂದಲಗಳ ನಡುವೆ ಇಂದು ಮುಂಜಾನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಕ್ತಿ ದೇವತೆ ಅಂದ್ಲೆ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಯ ಪ್ರಶ್ನೆ ಕೇಳಿದ್ದಾರೆ.

ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಸಿಗಲಿದೆ ಎಂಬ ವದಂತಿಗಳ ನಡುವೆ ಒಂದಿಷ್ಟು ಮಹತ್ವದ ತಿರುವುಗಳು ಕಂಡು ಬಂದವು. ಹೈಕಮಾಂಡ್‌ನ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರನ್ನು ಔತಣಕೂಟಕ್ಕೆ ಆಹ್ವಾನಿಸಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಅನಂತರದ ಬೆಳವಣಿಗೆಯಲ್ಲಿ ಜ್ವಾಲಾಮುಖಿಯಂತೆ ಕುದಿಯುತ್ತಿದ್ದ ರಾಜಕೀಯ ತಣ್ಣಗಾದಂತೆ ಕಂಡು ಬಂತು.

ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ನಡುವಿನ ಅಧಿಕಾರ ತಗಾದೆಗೆ ತಾತ್ಕಾಲಿಕ ವಿರಾಮ ದೊರೆತಿತ್ತು.

ದೇವಸ್ಥಾನದ ಪ್ರತೀತಿ:
ಈ ದೇವಸ್ಥಾನದಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆದರೆ ಅದು ದೇವಿ ಹೇಳಿದಂತೆ ನಡೆಯಲಿದೆ ಎಂಬ ಪ್ರತೀತಿ ಇದೆ. ಈ ಹಿಂದೆ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಜೈಲು ಸೇರಿದ ವೇಳೆಯಲ್ಲಿ ಡಿ.ಕೆ.ಶಿವಕುಮಾರ್‌ ಆಪ್ತರು ದೇವಸ್ಥಾನಕ್ಕೆ ಬಂದು ಪ್ರಶ್ನೆ ಕೇಳಿದ್ದರು. ಆಗ ದೊರೆತ ಉತ್ತರದ ಪ್ರಕಾರವೇ ನಡೆದಿದೆ ಎಂದು ಭಾವಿಸಲಾಗಿದೆ.

ಅನಂತರ ಮಹತ್ವದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಈ ದೇವಸ್ಥಾನಕ್ಕೆ ಬಂದು ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳುವ ಮೂಲಕ, ಅಲ್ಲಿನ ವಾಗ್ದಾನದಂತೆ ನಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಈ ದೇವಸ್ಥಾನದಲ್ಲಿನ ಪೂಜೆಯಿಂದ ಇಷ್ಟಾರ್ಥ ಸಿದ್ಧಿಯಾಗಲಿದೆ. ದೇವಿ ನೀಡಿದ ವಚನದಂತೆಯೇ ನಡೆಯಲಿದೆ ಎಂದು ಡಿ.ಕೆ. ಶಿವಕುಮಾರ್‌ ನಂಬಿದ್ದಾರೆ.

ಅದಕ್ಕಾಗಿ ಇಂದು ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌, ಆಪ್ತರ ಜೊತೆ ಸುಮಾರು 2 ಗಂಟೆ ಕಾಲ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿ ಆಪ್ತ ಮೂವರಿಗೆ ಮಾತ್ರ ಇರಲು ಅವಕಾಶ ಕಲ್ಪಿಸಲಾಗಿತ್ತು. ತದೇಕಚಿತ್ತದಿಂದ ಕುಳಿತು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ನಡುವೆಯೂ ತರಾತುರಿಯಲಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿರುವುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಪೂಜೆ ಸಲ್ಲಿಸಿದ ಬಳಿಕ ಡಿ.ಕೆ.ಶಿವಕುಮಾರ್‌ ಮತ್ತೆ ಬೆಳಗಾವಿಗೆ ಧಾವಿಸಿ ಬಂದರು.

ಅತ್ತ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಔತಣಕೂಟಗಳ ಮೇಲೆ ಔತಣಕೂಟಗಳನ್ನು ನಡೆಸುತ್ತಿದ್ದಾರೆ. ಊಟದ ಸಭೆಗಳ ಮೂಲಕವೇ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸ್ಥಾನಪಲ್ಲಟವನ್ನು ತಪ್ಪಿಸಲು ಒಂದೆಡೆ ತಂತ್ರಗಾರಿಕೆಗಳ ನಡೆಯುತ್ತಿದ್ದರೆ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ದೇವರ ಮೊರೆ ಹೋಗುವ ಮೂಲಕ ತಮ ರಾಜಕೀಯ ಭವಿಷ್ಯ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

RELATED ARTICLES

Latest News