ಮೈಸೂರು,ಡಿ.27- ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಇದೀಗ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೇರಿದೆ. ಇಲ್ಲಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಎಂಬುವವರು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ, ಆಟೋ ಚಾಲಕ ವೃತ್ತಿ ಮಾಡುವ ರಾಜೇಶ್ ಅವರ ಪತ್ನಿ ಲಕ್ಷ್ಮೀ ಅವರು ಮೂಲತಃ ಮಂಡ್ಯದ ಹೊಸಹಳ್ಳಿ ಗ್ರಾಮದವರು.ಬೆಳವಾಡಿಯ ಸಂಬಂಧಿಕರ ಮನೆಗೆ ಲಕ್ಷ್ಮೀ ಅವರು ತಮ ಮಗಳು ಡಿಂಪಲ್ ಜೊತೆ ಬಂದಿದ್ದರು. ಈ ವೇಳೆ ಅರಮನೆ ನೋಡಲು ಮೊನ್ನೆ ಮಗಳು ಹಾಗೂ ಸಂಬಂಧಿಕರ ಜೊತೆ ಹೋಗಿದ್ದರು.
ಆ ಸಂದರ್ಭದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಸಿಲಿಂಡರ್‌ನಿಂದ ಬಲೂನ್‌ಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಉತ್ತರ ಪ್ರದೇಶ ಮೂಲದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆ ಸ್ಥಳದಲ್ಲಿದ್ದ ಮಂಜುಳ, ಲಕ್ಷ್ಮೀ ಸೇರಿದಂತೆ ನಾಲ್ಕೈದು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ನಂಜನಗೂಡು ಮೂಲದ, ನಗರದಲ್ಲಿ ಹೂ ಮಾರಾಟ ಮಾಡುತ್ತಿದ್ದ ಮಂಜುಳ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ಲಕ್ಷ್ಮೀ ಅವರೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹಲವು ಅನುಮಾನ:
ಉತ್ತರ ಪ್ರದೇಶದಿಂದ ಹದಿನೈದು ದಿನಗಳ ಹಿಂದೆಯಷ್ಟೇ ಸಲೀಂ ನಗರಕ್ಕೆ ಬಂದಿದ್ದ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್‌್ಜನಲ್ಲಿ ಉಳಿದುಕೊಂಡು ಅರಮನೆ ಮೈದಾನದ ಬಳಿ ಇಬ್ಬರು ಸೇಹಿತರೊಂದಿಗೆ ಬಲೂನ್ ಮಾರಾಟ ಮಾಡುತ್ತಿದ್ದನು.ಆದರೆ ಮೊನ್ನೆ ರಾತ್ರಿ ಸಲೀಂ ಒಬ್ಬನೇ ಬಲೂನ್ ಮಾರಾಟ ಮಾಡುತ್ತಿದ್ದುದ್ದು ಹಲವಾರು ಅನುಮಾನ ಮೂಡಿಸಿದೆ.ಈ ಬಗ್ಗೆ ಎನ್‌ಐಎ ಕೂಡ ತನಿಖೆ ನಡೆಸುತ್ತಿದ್ದು, ಈತನ ಜೊತೆಯಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
